ಕುಂಬಳೆ: ಸೂರಂಬೈಲಿನಲ್ಲಿ ಹಲವರಿಗೆ ಕಚ್ಚಿ ಗಾಯಗೊಳಿಸಿದ ಬೀದಿನಾಯಿಯನ್ನು ನಾಗರಿಕರು ಹೊಡೆದು ಕೊಂದು ಹೂತು ಹಾಕಿದ್ದಾರೆ. ಆದರೆ ಈ ನಾಯಿ ಹಲವು ನಾಯಿಗಳಿಗೆ, ಬೆಕ್ಕುಗಳಿಗೆ ಕಚ್ಚಿರುವುದಾಗಿ ಹೇಳಲಾಗುತ್ತಿದ್ದು, ಇದರಿಂದ ಆತಂಕ ಮುಂದುವರಿದಿದೆ. ಸೂರಂಬೈಲಿನ ರಾಮ, ಶಿವ, ರತ್ನ ಹಾಗೂ ಇನ್ನೋರ್ವೆಗೆ ನಿನ್ನೆ ಹಗಲು ನಾಯಿ ಕಚ್ಚಿ ಗಾಯಗೊಳಿಸಿತ್ತು. ಇವರು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಸಂಜೆಯೂ ನಾಯಿ ಇತರ ಪ್ರಾಣಿಗಳಿಗೆ ಕಚ್ಚಿರುವುದಾಗಿ ಹೇಳಲಾಗುತ್ತಿದೆ. ರಾತ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸೂರಂಬೈಲಿನ ರವಿ ಹಾಗೂ ಇನ್ನೋರ್ವನಿಗೂ ಕಚ್ಚಿ ಗಾಯಗೊಳಿಸಿದೆ. ಇದರಿಂದ ನಾಗರಿಕರು ಹುಡುಕಾಡಿ ಆ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ. ಹುಚ್ಚು ರೋಗ ತಗಲಿರುವ ನಾಯಿ ಇದಾಗಿರಬಹು ದೆಂದು ನಾಗರಿಕರು ಹೇಳುತ್ತಿದ್ದಾರೆ. ಈ ನಾಯಿಯನ್ನು ಕೊಂದಿದ್ದರೂ ಇತರ ಪ್ರಾಣಿಗಳಿಗೆ ಅದು ಕಚ್ಚಿರುವುದರಿಂದ ಆತಂಕ ಹುಟ್ಟಿಕೊಂಡಿದೆ.
ಸೂರಂಬೈಲು ಶಾಲೆಯಸಮೀಪ ಹಲವು ಬೀದಿ ನಾಯಿಗಳು ವಾಸಿಸುತ್ತಿವೆ. ಇವುಗಳು ವಿದ್ಯಾರ್ಥಿ ಗಳ ಮೇಲೆ ದಾಳಿಗೆ ಮುಂದಾಗುತ್ತಿ ರುವುದಾಗಿ ದೂರಲಾಗಿದೆ. ನಿನ್ನೆ ಹಲವರಿಗೆ ಕಚ್ಚಿದ ನಾಯಿ ಶಾಲೆ ಪರಿಸರದಲ್ಲಿರುವ ನಾಯಿಗಳಿಗೂ ಕಚ್ಚಿರಬಹುದೆಂಬ ಸಂಶಯ ಉಂಟಾಗಿದೆ. ಇದರಿಂದ ಶಾಲೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.






