ಬದಿಯಡ್ಕದಲ್ಲಿ ವಾಹನ ನಿಲುಗಡೆ ವಿವಾದದಿಂದ ಹೊಡೆದಾಟ: ಎರಡು ಪ್ರಕರಣಗಳಲ್ಲಾಗಿ 5 ಮಂದಿ ವಿರುದ್ಧ ಕೇಸು

ಬದಿಯಡ್ಕ:  ವಾಹನ ನಿಲುಗಡೆಗೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ಮಧ್ಯೆ ಹುಟ್ಟಿಕೊಂಡ  ವಿವಾದ ಹೊಡೆದಾಟದಲ್ಲಿ ಕೊನೆಗೊಂಡಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಎರಡು ಪ್ರಕರಣಗಳಲ್ಲಾಗಿ  ಒಟ್ಟು ೫ ಮಂದಿ ವಿರುದ್ಧ ಬದಿಯಡ್ಕ ಪೊಲೀಸರು  ಕೇಸು ದಾಖಲಿಸಿಕೊಂಡಿದ್ದಾರೆ.

ಬದಿಯಡ್ಕ ವಿದ್ಯಾಗಿರಿಯ ಜಲೀಲ್ ಮಂಜಿಲ್‌ನ ಎಂ.ಬಿ. ಅಬ್ದುಲ್ಲ ಕುಂಞಿ (66) ನೀಡಿದ ದೂರಿನಂತೆ ಬದಿಯಡ್ಕ ಬೀಜಂತಡ್ಕದ ಗಿರೀಶ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದೇ ವೇಳೆ ಗಿರೀಶ್ ನೀಡಿದ ದೂರಿನಂತೆ ವಿದ್ಯಾಗಿರಿ ನಿವಾಸಿಗಳಾದ ಅಬ್ದುಲ್ಲ, ಅಸ್ಕರ್, ಅನನ್‌ಶಾ, ಜುನೈದ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಈ ತಿಂಗಳ ೧೭ರಂದು ಸಂಜೆ ೪ ಗಂಟೆಗೆ ಬದಿಯಡ್ಕ ಪೇಟೆಯಲ್ಲಿ ಘಟನೆ ನಡೆದಿದೆ. ವಾಹನ ನಿಲುಗಡೆಗೆ ಸಂಬಂಧಿಸಿ ಮೊದಲು ಅಬ್ದುಲ್ಲ ಕುಂಞಿ ಹಾಗೂ ಗಿರೀಶ್ ಮಧ್ಯೆ  ವಾಗ್ವಾದ ನಡೆದು ಬಳಿಕ ಹೊಡೆದಾಡಿಕೊಂಡಿದ್ದರೆನ್ನಲಾಗಿದೆ. ಅದನ್ನು ಕಂಡು ಅಲ್ಲಿಗೆ ತಲುಪಿದ ವಿದ್ಯಾಗಿರಿ ನಿವಾಸಿಗಳಾದ ಅಬ್ದುಲ್ಲ ಅಸ್ಕರ್, ಅನಾನ್‌ಶಾ, ಜುನೈದ್ ಎಂಬಿವರು ಗಿರೀಶ್‌ರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಘಟನೆ ಬಗ್ಗೆ  ಬದಿಯಡ್ಕ ಪೊಲೀಸರಿಗೆ ದೂರು ಲಭಿಸಿತ್ತು. ಅದರಂತೆ ಗಿರೀಶ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಅನಂತರ ಗಿರೀಶ್ ಎಸ್‌ಎಂಎಸ್ ಡಿವೈಎಸ್ಪಿಗೆ ದೂರು ನೀಡಿ ತನಗೆ ಹಲ್ಲೆಗೈದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರಂತೆ  ಗಿರೀಶ್‌ಗೆ ಹಲ್ಲೆಗೈದ ೪ ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page