ಕುಂಬಳೆ ಪೇಟೆಯಲ್ಲಿ ಘರ್ಷಣೆ: ವಾಸಸ್ಥಳಕ್ಕೆ ಅತಿಕ್ರಮಿಸಿ ನುಗ್ಗಿ ಒಡಿಶ್ಶಾ ನಿವಾಸಿಗೆ ಹಲ್ಲೆಗೈದ ಆರೋಪಿ ಸೆರೆ

ಕುಂಬಳೆ:  ಇಲ್ಲಿನ ಪೇಟೆಯಲ್ಲಿ ಘರ್ಷಣೆ ಸೃಷ್ಟಿಸಿರುವುದಲ್ಲದೆ   ಮೀನು ಕಾರ್ಮಿಕನಾದ ಒಡಿಶಾ ನಿವಾಸಿಗೆ ಹಲ್ಲೆಗೈದ ಪ್ರಕರಣದಲ್ಲಿ ಯುವಕನನ್ನು ಬಂಧಿಸಲಾಗಿದೆ.  ಕೊಯಿಪ್ಪಾಡಿ ನಿವಾಸಿ ಆಸಿಫ್ ಎಂಬಾತ ಸೆರೆಗೀಡಾದ ಆರೋಪಿ ಯಾಗಿದ್ದಾನೆ. ಒಡಿಶಾ ಬುಶಾಂತಪುರ್ ನಿವಾಸಿ ಸಂತೋಷ್ ಬೆಹ್ರ (44) ಎಂಬವರ  ಮೇಲೆ ಆಸಿಫ್ ಹಲ್ಲೆಗೈದಿರುವು ದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ 1 ಗಂಟೆ ವೇಳೆ ಸಂತೋಷ್‌ರ ಕೊಯಿಪ್ಪಾಡಿಯಲ್ಲಿರುವ ವಾಸಸ್ಥಳಕ್ಕೆ ತಲುಪಿದ ಆಸಿಫ್ ಕೊಠಡಿಗೆ ಅತಿಕ್ರಮಿಸಿ ನುಗ್ಗಿ ಬೆದರಿಕೆಯೊ ಡ್ಡಿದ್ದನು.  ಈ ವೇಳೆ ವಾಗ್ವಾದ ಉಂ ಟಾಗಿದ್ದು, ಈಮಧ್ಯೆ ಸಂತೋಷ್‌ರ ತಲೆಗೆ ಹೊಡೆದು, ಕುತ್ತಿಗೆ ಹಿಡಿದು ತಲೆಯನ್ನು ಗೋಡೆಯ ಕನ್ನಡಿಗೆ ಬಡಿದು ಗಾಯಗೊಳಿಸಿದ್ದನೆನ್ನಲಾಗಿದೆ.  ತಲೆ  ಬಡಿದು ಕನ್ನಡಿ ಪುಡಿಗೈಯ್ಯಲ್ಪಟ್ಟಿದೆ. ಪುಡಿಗೈಯ್ಯಲ್ಪಟ್ಟ   ಗಾಜಿಗೆ  ಮತ್ತೆ ತಲೆಯನ್ನು ಬಡಿಯಲು ಯತ್ನಿಸುತ್ತಿದ್ದಾಗ ಸಂತೋಷ್  ಓಡಿ ಪರಾರಿಯಾಗಿದ್ದರು. ಓಡಿ ತಪ್ಪಿಸಿಕೊಳ್ಳದಿರುತ್ತಿದ್ದಲ್ಲಿ  ಗಾಜಿನಿಂದ ತಲೆಗೆ ಗಾಯಗೊಂಡು ಸಾವು ಸಂಭವಿಸುವ ಸಾಧ್ಯತೆ ಇತ್ತೆಂದು ಸಂತೋಷ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿ ದ್ದಾರೆ.  ಸಂತೋಷ್  ಕೊಠಡಿಯಿಂದ  ತೆರಳುವಂತೆ ಆಸಿಫ್ ತಿಳಿಸಿದಾಗ  ಅದನ್ನು ಅನುಸರಿಸದಿರುವುದು ಹಾಗೂ ಬೆಂಕಿ ಪೆಟ್ಟಿಗೆ ಕೇಳಿದಾಗ ಕೊಡದಿರುವುದೇ ಹಲ್ಲೆಗೆ ಕಾರಣವೆಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಮೇಲೆ ಕೇಸು ದಾಖಲಿಸಿಕೊಂಡ ಪೊಲೀಸರು ಆಸಿಫ್‌ನನ್ನು ಠಾಣೆಯಲ್ಲಿ ಹಾಜರಾಗುವಂತೆ ತಿಳಿಸಿದ್ದರು. ಈಮಧ್ಯೆ ಕುಂಬಳೆ ಜಂಕ್ಷನ್‌ನಲ್ಲಿ ನಿನ್ನೆ ರಾತ್ರಿ ಓರ್ವ ಘರ್ಷಣೆ ಸೃಷ್ಟಿಸುತ್ತಿದ್ದಾನೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ  ಅಲ್ಲಿಗೆ ತಲುಪಿದ ಪೊಲೀಸರ ವಿರುದ್ಧ ಕೆಲವರು ತಿರುಗಿ ಬಿದ್ದಿದ್ದರು. ಈ ವೇಳೆ ಘರ್ಷಣೆ ನಿಯಂತ್ರಿಸಲು ಎಆರ್ ಕ್ಯಾಂಪ್‌ನಿಂದ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ತಲುಪಬೇಕಾಗಿಬಂತು.ಕೊನೆಗೆ ಸಿಐ ಆರ್.ಪಿ. ಅನೂಪ್ ಕೃಷ್ಣನ್, ಎಸ್‌ಎಚ್‌ಒ ಎಸ್ ಅನೂಪ್, ಎಸ್‌ಐ ವಿಶಾಖ್ ಸೇರಿ ಆಸಿಫ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಆತನ ಬಂಧನ ದಾಖಲಿಸಲಾಯಿತು. ನರಹತ್ಯಾಯತ್ನ, ಮನಪೂರ್ವಕ ಗಾಯಗೊಳಿಸುವಿಕೆ, ಅತಿಕ್ರಮಿಸಿ ಕೊಠಡಿಗೆ ನುಗ್ಗಿ ಬೆದರಿಕೆ ಮೊದಲಾದ ಆರೋಪಗಳಂತೆ ಆಸಿಫ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page