ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿದೆ. ಹೊಡೆದಾಟ ಮಧ್ಯೆ ಹೊರಗಿನಿಂದ ತಲುಪಿದ ಓರ್ವ ಇಬ್ಬರು ವಿದ್ಯಾರ್ಥಿಗಳಿಗೆ ಹಲ್ಲೆಗೈದು ಪರಾರಿಯಾಗಿರುವುದಾಗಿ ದೂರಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಮುಹಮ್ಮದ್ ಯಾಸಿಂ, ಶಮ್ಮಾಸ್ ಎಂಬಿವರನ್ನು ಕುಂಬಳೆ ಸರಕಾರಿ ಕಮ್ಯೂ ನಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ನಿನ್ನೆ ಸಂಜೆ ಶಾಲೆ ಬಿಟ್ಟು ಬಳಿಕ ಮನೆಗೆ ಹೊರಟ ಹತ್ತನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಶಾಲಾ ಕಂಪೌಂಡ್ನೊಳಗೆ ವಿದ್ಯಾರ್ಥಿಗಳ ಘರ್ಷಣೆ ನಡೆಯುತ್ತಿದ್ದಂತೆ ಹೊರಗಿನಿಂದ ಬಂದ ಓರ್ವ ವಿದ್ಯಾರ್ಥಿಗಳಿಗೆ ಹಲ್ಲೆಗೈದಿದ್ದಾನೆನ್ನಲಾಗಿದೆ. ಬಳಿಕ ಅಲ್ಲಿಂದ ಪರಾರಿಯಾದ ಈತನಿಗಾಗಿ ಶೋಧ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಿತ್ಯ ಘಟನೆಯಾಗಿದೆಯೆಂದು ಆರೋಪ ಪದೇ ಪದೇ ಕೇಳಿ ಬರುತ್ತಿದೆ. ೧೦ನೇ ತರಗತಿ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ೧೦ನೇ ತರಗತಿ ಹಾಗೂ ಪ್ಲಸ್ಟು ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆಯುತ್ತಿರುವುದಾಗಿ ದೂರಲಾಗಿದೆ. ಇದರಿಂದ ಕಲಿಕೆಗಾಗಿ ಬರುವ ಬಡ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆಯೆಂದೂ ದೂರಲಾಗಿದೆ.