ಸಿ.ಎನ್.ಜಿ ಅನಿಲ ಸಾಗಿಸುವ ವೇಳೆ ಸೋರಿಕೆ: ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ

ಕಾಸರಗೋಡು: ಲಾರಿಯಲ್ಲಿ ಸಿಎನ್‌ಜಿ ಅನಿಲ ಸಿಲಿಂಡರ್‌ಗಳನ್ನು ಹೇರಿ ಸಾಗಿಸುತ್ತಿದ್ದ ವೇಳೆ ಆಂತರಿಕ ಒತ್ತಡದಿಂದಾಗಿ ಅದರಲ್ಲಿ ಎರಡು ಸಿಲಿಂಡರ್‌ಗಳ ಫಿಲ್ಲಿಂಗ್ ಪೈಪ್‌ನ ವಾಷರ್ ಸಡಿಲುಗೊಂಡು ಹೊರಕ್ಕೆ ಬಂದು ಅದರಿಂದ ಅನಿಲ ಸೋರಿಕೆ ಉಂಟಾಗಿ ಅಗ್ನಿಶಾಮಕ ದಳದವರು ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತ ತಪ್ಪಿಹೋದ ಘಟನೆ ನಡೆದಿದೆ.

ಅದಾನಿ ಗ್ರೂಪ್‌ನ ಸಿಎನ್‌ಜಿ ಅನಿಲ ತುಂಬಿಸಲಾದ ಸಿಲಿಂಡರ್‌ಗಳನ್ನು ಲಾರಿಯಲ್ಲಿ ಹೊಸದುರ್ಗ ಮಾವುಂಗಾಲ್‌ನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ತೃಕ್ಕನ್ನಾಡ್ ಶಾಲೆ ಬಳಿ ತಲುಪಿದಾಗ ಅದರಲ್ಲಿ ಎರಡು ಸಿಲಿಂಡರ್‌ಗಳಲ್ಲಿ ಅನಿಲ ಸೋರಿಕೆ ಉಂಟಾಗಿದೆ. ಆ ಲಾರಿಯಲ್ಲಿ ಒಟ್ಟು ೪೦ರಷ್ಟು ಸಿಲಿಂಡರ್‌ಗಳಿದ್ದವು. ಅನಿಲ ಸೋರಿಕೆಯನ್ನು ಗಮನಿಸಿದ ಲಾರಿ ಚಾಲಕ ತಕ್ಷಣ ಅದನ್ನು ರಸ್ತೆ ಬದಿ ನಿಲ್ಲಿಸಿದರು. ಆ ವೇಳೆ ಪರಿಸರದ ಜನರಲ್ಲಿ ಭಾರೀ ಆತಂಕವೂ ಉಂಟಾಯಿತು. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ವಿ.ಎನ್. ವೇಣುಗೋ ಪಾಲನ್ ಮತ್ತು ವಿ.ಎಂ. ಸತೀಶನ್‌ರ ನೇತೃತ್ವದಲ್ಲಿ ಸಿಬ್ಬಂದಿ ಗಳು ಕಾಸರಗೋಡು ಅಗ್ನಿಶಾಮಕದ ಎರಡು ಇಂಜಿನ್‌ಗಳಲ್ಲಿ ಸಹಿತ ಘಟನೆ ನಡೆದ ಸ್ಥಳಕ್ಕೆ ತಕ್ಷಣ ಆಗಮಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಅನಿಲ ಸೋರಿಕೆಯನ್ನು ತಡೆದರು. ಆ ವೇಳೆ ಎರಡು ಸಿಲಿಂಡರ್‌ಗಳ ಅನಿಲ ಪೂರ್ಣವಾಗಿ ಸೋರಿ ಹೋಗಿತ್ತು. ಆ ವೇಳೆ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯದ ರಕ್ಷಾ ಕ್ರಮ ನಡೆಸಿದರು. ಈ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ತಂಡದಲ್ಲಿ ಇತರ ಸಿಬ್ಬಂದಿಗಳಾದ ಪ್ರಸೀದ್ ಕೆ.ಆರ್, ಅಜೇಶ್ ವಿ.ಕೆ, ಶೈಜು ಪಿ.ಸಿ, ಮುಹಮ್ಮದ್ ಸಿರಾಜುದ್ದೀನ್, ಜೆ.ವಿ. ಅಭಯ್ ಸೇನ್, ವಿ.ಎಸ್. ಗೋಕುಲ್ ಕೃಷ್ಣನ್, ಅತುಲ್ ರವಿ, ಕೆ. ಅನುಶ್ರೀ, ಕೆ. ಶ್ರೀಜಿಷಾ, ಹೋಮ್‌ಗಾರ್ಡ್‌ಗಳಾದ ವಿ.ವಿ. ಉಣ್ಣಿಕೃಷ್ಣ ನ್, ಎ. ರಾಜೇಂದ್ರನ್ ಎಂಬವರು ಒಳಗೊಂಡಿದ್ದರು.

You cannot copy contents of this page