ಕಾಸರಗೋಡು: ಪಾಲಕುನ್ನು ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಇರಿಸಿ ಅಪಾಯ ಸೃಷ್ಟಿಸಲೆತ್ನಿಸಿದ ಪ್ರಕರಣದಲ್ಲಿ ಬೇಕಲ ಪೊಲೀಸರು ಹಾಗೂ ಆರ್‌ಪಿಎಫ್ ತನಿಖೆ ತೀವ್ರಗೊಳಿಸಿದೆ. ಶನಿವಾರ ರಾತ್ರಿ 8.30ರ ವೇಳೆ ಕೋಟಿಕುಳಂ ರೈಲ್ವೇ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ನ ದಕ್ಷಿಣ ಭಾಗದಲ್ಲಿರುವ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ. ರೈಲ್ವೇಯ ಅಗತ್ಯಕ್ಕಾಗಿ ಹಳಿಯ ಸಮೀಪ ಇರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ನ್ನು ಹಳಿಯ ಮೇಲಿರಿಸಿರುವುದು ಕಂಡುಬಂದಿದೆ. ರೈಲ್ವೇ ನಿಲ್ದಾಣ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವವರ ಗಮನಕ್ಕೆ ಇದು ಬಂದ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಧಿಕಾರಿಗಳು ಹಾಗೂ ಪೊಲೀಸರು ತಲುಪಿ ಸ್ಲ್ಯಾಬ್ ತೆರವುಗೊಳಿಸಿದುದರಿಂದ ಭಾರೀ ಅಪಾಯವೊಂದು ತಪ್ಪಿಹೋಗಿದೆ. ರಾತ್ರಿ 8.15ರ ವೇಳೆ ಈ ಹಳಿಯ ಮೇಲೆ ರೈಲು ಸಂಚರಿಸಿತ್ತು. ಅನಂತ ರವೇ ದುಷ್ಕರ್ಮಿಗಳು ಹಳಿಯ ಮೇಲೆ ಸ್ಲ್ಯಾಬ್ ಇರಿಸಿದ್ದಾರೆಂದು ಅಂದಾಜಿಸಲಾಗಿದೆ. ಸ್ಟೇಶನ್ ಮಾಸ್ತರ್ ಟಿ.ಮುಹಮ್ಮದ್ ಫಯಾಸ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.






