ಕಾಸರಗೋಡು: ಪೊಲೀಸ್ ಠಾಣೆಗಳಲ್ಲಿ ಅಮಾಯಕರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಿನ್ನೆ ಜಿಲ್ಲೆಯ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನಾ ಸಭೆಗಳನ್ನು ನಡೆಸಲಾಯಿತು. ಕಾಸರಗೋಡು ಪೊಲೀಸ್ ಠಾಣೆ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು. ಕಾಂಗ್ರೆಸ್‌ನ ಕಾಸರಗೋಡು, ಚೆಂಗಳ, ಮಧೂರು ಮತ್ತು ಮೊಗ್ರಾಲ್ ಪುತ್ತೂರು ಮಂಡಲಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಚೆಂಗಳ ಮಂಡಲಾಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಇದರ ಹೊರತಾಗಿ ಮಂಜೇಶ್ವರ, ಮಂಗಲ್ಪಾಡಿ, ಮೀಂಜ, ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ಪರಿಸರದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಯುಡಿಎಫ್ ಜಿಲ್ಲಾ ಸಂಚಾಲಕ ಗೋವಿಂದನ್ ನಾಯರ್ ಉದ್ಘಾಟಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಹನೀಫ್ ಪಡಿಜ್ಞಾರ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಮುಹಮ್ಮದ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಉನೈಸ್, ಹರ್ಷಾದ್ ವರ್ಕಾಡಿ, ಅರ್ಜುನನ್ ತಾಯಲಂಗಾಡಿ, ಸತ್ಯನ್ ಉಪ್ಪಳ, ಗೀತಾ ಬಂದ್ಯೋಡು, ಪುರುಷೋತ್ತಮ ಅರಿಬೈಲು, ದಾಮೋದರನ್, ಬಾಬು ಬಂದ್ಯೋಡು, ಆರಿಫ್ ಮಚ್ಚಂಪಾಡಿ, ಇರ್ಷಾದ್ ಮಾತನಾಡಿದರು.
ಇದರ ಹೊರತಾಗಿ ಚಟ್ಟಂಚಾಲ್ ಬೇಡಗಂ ಸೇರಿದಂತೆ ಜಿಲ್ಲೆಯ ಇತರ ಹಲವು ಪೊಲೀಸ್ ಠಾಣೆಗಳ ಪರಿಸರದಲ್ಲಿ ನಿನ್ನೆ ಪ್ರತಿಭಟನಾ ಸಭೆಗಳನ್ನು ನಡೆಸಲಾಯಿತು. ಜಿಲ್ಲಾ ಮಟ್ಟದ ಪ್ರತಿಭಟನಾ ಸಭೆ ನಿನ್ನೆ ಹೊಸದುರ್ಗ ಪೊಲೀಸ್ ಠಾಣೆ ಬಳಿ ನಡೆಯಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.