ಕಾಸರಗೋಡು: ಚೆರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯಿಂದ ನಿರ್ಮಾಣ ಕಾರ್ಮಿಕ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಅಸ್ಸಾಂ ಬಾಲ್‌ಪೆಟ್ಟ ನಿವಾಸಿ ರಬಿಬುಲ್ ಹಕ್ (27) ಸಾವನ್ನಪ್ಪಿದ ವ್ಯಕ್ತಿ.ನಿನ್ನೆ ಸಂಜೆ ಸುಮಾರು ೬.೩೦ಕ್ಕೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಚೆರ್ಕಳ ಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಕಾಂಕ್ರೀಟೀಕರಣಕ್ಕಾಗಿ ಕಬ್ಬಿಣದ ಸರಳು ಕಟ್ಟುತ್ತಿದ್ದ ವೇಳೆ ರಬಿಬುಲ್ ಹಕ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಆತನ ಜತೆ ಇತರ ಐದು ಮಂದಿ ಕಾರ್ಮಿಕರೂ ಕೆಲಸದಲ್ಲಿ ನಿರತರಾಗಿದ್ದರು. ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಹಕ್‌ನನ್ನು ತಕ್ಷಣ ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿವಾಹಿತನಾಗಿ ಒಂದು ಮಗುವಿನ ತಂದೆಯಾಗಿರುವ ಹಕ್ ಐದು ತಿಂಗಳ ಹಿಂದೆಯಷ್ಟೇ ಚೆರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಕೆಲಸಕ್ಕೆ ಸೇರ್ಪ ಡೆಗೊಂಡಿದ್ದನು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.