ಕಾಸರಗೋಡು: ಕೇರಳ ಕೃಷಿ ಇಲಾಖೆ ಕೃಷಿ ಭವನ ಮೂಲಕ ತಮ್ಮ ಮಾರಾಟ ಕೇಂದ್ರಗಳಲ್ಲಿ ವಿತರಿಸುವ ನೀರುಳ್ಳಿ ಕಳಪೆಮಟ್ಟದ್ದಾಗಿದೆಯೆಂಬ ಆರೋಪ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆ ನೀರುಳ್ಳಿಗೆ ಅಂಗಡಿಗಳಲ್ಲಿ ಕಿಲೋವೊಂದಕ್ಕೆ 1೦೦ ರೂ. ತನಕ ತಲುಪಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ನೀರುಳ್ಳಿ ಲಭ್ಯಗೊಳಿಸಲು ಕೃಷಿ ಇಲಾಖೆ ಕಿಲೋಗೆ 35ರೂ. ದರದಲ್ಲಿ ನೀರುಳ್ಳಿ ಸರಬರಾಜು ಮಾಡಲಾಗಿತ್ತು. ಇದೀಗ ಅಂಗಡಿಗಳಲ್ಲಿ ನೀರುಳ್ಳಿ ದರ ಇಳಿಮುಖವಾಗಿ ಕಿಲೋವೊಂದಕ್ಕೆ 5೦ರಿಂದ 6೦ ರೂಪಾಯಿ ವರೆಗೆ ಇದೆ. ಕೃಷಿ ಇಲಾಖೆಯ ಮಾರಾಟ ಕೇಂದ್ರಗಳಲ್ಲಿ 35 ರೂ.ಗಳಿಗೆ ಮಾರಾಟ ಮಾಡುವ ನೀರುಳ್ಳಿ ದಿನಕಳೆದಂತೆ ಕಳಪೆಮಟ್ಟದ್ದಾಗಿದ್ದು ಜನರು ಅದನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಅಲ್ಲಿ ಮಾರಾಟ ಕುಸಿತವಾಗಿದೆ. ನೀರುಳ್ಳಿ ಬೇಗನೆ ಕೊಳೆತು ನಷ್ಟದ ಸ್ಥಿತಿಗೆ ತಲುಪಿರುವುದು ಗ್ರಾಹಕರಿಗೆ ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ. ಜನರಿಗೆ ಕಡಿಮೆ ಬೆಲೆಗೆ ನೀರುಳ್ಳಿ ತಲುಪಿಸಲು ಸರಕಾರದ ಕೃಷಿ ಇಲಾಖೆ ಏರ್ಪಡಿಸಿದ ವ್ಯವಸ್ಥೆ ಉತ್ತಮವಾಗಿತ್ತಾದರೂ ಅಲ್ಲಿ ಲಭಿಸುವ ನೀರುಳ್ಳಿ ಕಳಪೆಮಟ್ಟದ್ದಾಗಿ ರುವುದರಿಂದ ಅದರತ್ತ ಜನರು ಆಕರ್ಷಿತರಾಗುತ್ತಿಲ್ಲ.
ನೀರುಳ್ಳಿಗೆ ಬೆಲೆಯೇರಿಕೆಯಾದುದರಿಂದ ಕಣ್ಣೂರಿನ ಹಾರ್ಟಿ ಕಾರ್ಪ್ ನೀರುಳ್ಳಿ ಖರೀದಿಸಿ ತಂದು ಕೃಷಿ ಭವನಗಳ ಮೂಲಕ ಕಡಿಮೆ ಬೆಲೆಗೆ ಮಾರಾಟ ಆರಂಭಿಸಲಾಗಿತ್ತು. ಈ ರೀತಿಯಲ್ಲಿ ಮೊದಲು ಉತ್ತಮ ಗುಣಮಟ್ಟದ ನೀರುಳ್ಳಿ ಲಭಿಸುತ್ತಿದ್ದುದರಿಂದ ಭಾರೀ ಬೇಡಿಕೆ ಕಂಡುಬಂದಿತ್ತು. ಇದನ್ನು ಮನಗಂಡು ಹಾರ್ಟಿಕೋರ್ಪ್ ಅನಂತರ ಹೆಚ್ಚಿನ ಪ್ರಮಾಣದಲ್ಲಿ ನೀರುಳ್ಳಿಯನ್ನು ಕೃಷಿ ಭವನಕ್ಕೆ ತಲುಪಿಸಿತ್ತು. ಆದರೆ ಅದರ ಗುಣಮಟ್ಟ ಕಡಿಮೆಯಾದುದರಿಂದ ಮಾರಾಟವಾಗದೆ ಅಲ್ಲೇ ಕೊಳೆತು ದುರ್ನಾತ ಬೀರುವ ಸ್ಥಿತಿ ಉಂಟಾಗಿದೆ.
ಹಾರ್ಟಿಕೋರ್ಪ್ 4೦ ಕಿಲೋದ 4ಚೀಲ ನೀರುಳ್ಳಿಯನ್ನು ಕೃಷಿ ಭವನಕ್ಕೆ ತಲುಪಿಸಿ ಕಿಲೋಗೆ ೩೫ ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿತ್ತು. ಮೊದಲು ತಂದ ನೀರುಳ್ಳಿ ಬೇಗನೆ ಮುಗಿದುದರಿಂದ ಅನಂತರ ೫೦ ಕಿಲೋದ 6 ಗೋಣಿ ನೀರುಳ್ಳಿ ಕೃಷಿ ಭವನಗಳಿಗೆ ತಲುಪಿಸಲಾಗಿತ್ತು. ಕಿಲೋಗೆ 32 ರೂ. ದರದಲ್ಲಿ ಕೃಷಿ ಭವನಗಳು ಹಾರ್ಟಿಕೋರ್ಪ್ಗೆ ನೀಡಿ 35 ರೂ. ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕಾಗಿತ್ತು. ಆದರೆ ಅನಂತರ ಬಂದ ನೀರುಳ್ಳಿ ಯಾರಿಗೂ ಬೇಡದಾಗಿರುವುದು ಕೃಷಿ ಭವನ ನೌಕರರಿಗೂ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಮಾರಾಟವಾಗದೆ ಹಾಳಾಗಲು ತೊಡಗಿದ ನೀರುಳ್ಳಿಯನ್ನು ಕೃಷಿ ಭವನದ ನೌಕರರು ಬಿಸಿಲಿನಲ್ಲಿರಿಸಿ ಒಣಗಿಸಲು ಪ್ರಯತ್ನಿಸುತ್ತಿದ್ದಾರಾದರೂ ಅದು ಒಣಗುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಇದೇ ವೇಳೆ ಈ ಪರಿಸರದಲ್ಲಿ ದುರ್ನಾತದಿಂದ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯುಂಟಾಗಿದೆ.ಇನ್ನು ಹಾರ್ಟಿಕೋರ್ಪ್ ನವರು ಇದರ ಹಣಕ್ಕಾಗಿ ಬರುವಾಗ ಕೃಷಿಕರಿಗೆ ಸಹಾಯವೊದಗಿಸಲು ಸರಕಾರ ವಹಿಸಿಕೊಟ್ಟ ಹಣವನ್ನು ನೀಡಬೇಕಾಗಿ ಬರಲಿದೆಯೆಂದೂ ನೌಕರರು ಹೇಳುತ್ತಿದ್ದಾರೆ. ಆದ್ದರಿಂದ ಕೃಷಿಕರಿಗೆ ಸೌಲಭ್ಯನೀಡಲು ಸಾಧ್ಯವಾಗದ ಸ್ಥಿತಿ ಉಂಟಾ ಗಲಿದೆ. ಕೊನೆಗೆ ನೀರುಳ್ಳಿ ವ್ಯಾಪಾರದಿಂದಾಗಿ ಕೃಷಿ ಕರಿಗೆ ಸಹಾಯವೊದಗಿಸಲು ಸಾಧ್ಯವಾಗಿಲ್ಲವೆಂದು ಸರಕಾರಕ್ಕೆ ತಿಳಿಸಬೇಕಾಗಿ ಬರಲಿದೆ. ಸಾಲದಲ್ಲಿ ಮುಳುಗುತ್ತಿರುವ ಸರಕಾರ ಇದನ್ನು ಕೂಡಾ ಸೇರಿಸಿದಾಗ ಭಾರೀ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.





