ಡಿಜಿಟಲ್ ಅರೆಸ್ಟ್ ಹೆಸರಲ್ಲಿ ದಂಪತಿಯ 2.40 ಕೋಟಿ ರೂ. ಲಪಟಾವಣೆ: 50 ಲಕ್ಷ ರೂ. ಮರಳಿ ವಶಪಡಿಸಿದ ಸೈಬರ್ ಪೊಲೀಸ್

ಕಾಸರಗೋಡು: ಕಾಞಂಗಾಡ್ ನಿವಾಸಿಗಳಾದ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಎಂಬ ಸೈಬರ್ ವಂಚನೆಯಲ್ಲಿ ಸಿಲುಕಿಸಿ 2.40 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ 50 ಲಕ್ಷ ರೂಪಾಯಿಗಳನ್ನು ಕಾಸರಗೋಡು ಸೈಬರ್ ಪೊಲೀಸರು ಮರಳಿ ವಶಪಡಿಸಿಕೊಂಡಿದ್ದಾರೆ. ವಂಚನೆಗಾರರು ಠೇವಣಿಯಿರಿಸಿದ ಇಂಡಸಿಂಡ್ ಬ್ಯಾಂಕ್‌ನ ಬಿಹಾರದ ಸಂಪತ್‌ಚಕ್ ಬ್ರಾಂಚ್‌ನಿಂದ ಎಂಟು ವಾರಗಳಲ್ಲಾಗಿ ೫೦ ಲಕ್ಷ ರೂ. ವಶಪಡಿಸಲಾಗಿದೆ.

ಕಾಞಂಗಾಡ್‌ನ ನಿವೃತ್ತ ಅಧ್ಯಾಪಕ ಹಾಗೂ ವೈದ್ಯೆಯಾದ ಪತ್ನಿಯ ಹಣವನ್ನು 2025 ಆಗಸ್ಟ್ 12ರಿಂದ 21ರವರೆಗಿನ ದಿನಾಂಕಗಳಲ್ಲಿ ಹಲವು ಬಾರಿಯಾಗಿ ಲಪಟಾಯಿಸಲಾಗಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಒಳಗೊಂಡಿರುವುದಾಗಿಯೂ ಇದರಿಂದ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ತಿಳಿಸಿ ದಂಪತಿಯ ಖಾತೆಯಿಂದ ಹಣವನ್ನು ವಂಚನೆಗಾರರು ತಮ್ಮ ಖಾತೆಗೆ ರವಾನಿಸಿಕೊಂಡಿದ್ದರು. ಅನಂತರ ವಂಚನೆಗೊಳಗಾದ ಬಗ್ಗೆ ತಿಳಿದ ದಂಪತಿ ಸೈಬರ್ ಪೊಲೀಸ್‌ನ ಸಹಾಯ ಯಾಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇದುವರೆಗೆ 57 ಲಕ್ಷ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಇದರಲ್ಲಿ 50 ಲಕ್ಷ ರೂಪಾಯಿಯನ್ನು ನ್ಯಾಯಾಲಯ ಮುಖಾಂತರ ಡಿಡಿ ಆಗಿ ಕಾಸರಗೋಡು ನ್ಯಾಯಾಲಯಕ್ಕೆ ತಲುಪಿಸಲಾಗಿದೆ. ಕೊನೆಯದಾಗಿ ವಂಚನೆಗಾರರಿಗೆ ಹಣ ನೀಡಿ ಕೆಲವು ಗಂಟೆಗಳೊಳಗೆ (ಗೋಲ್ಡನ್ ಹವರ್) ದೂರು ದಾಖಲಿಸಿರುವುದರಿಂದ ಹಣವನ್ನು ಮರಳಿ ಪಡೆಯಲು ಸಾಧ್ಯವಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಸೈಬರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಯು.ಪಿ. ವಿಪಿನ್‌ರ ಮೇಲ್ನೋಟದಲ್ಲಿ ಎಸ್‌ಐ ರವೀಂದ್ರನ್, ಶಿನು ಕೆ.ಬಿ, ಎಎಸ್‌ಐ ಪ್ರಶಾಂತ್, ರಂಜಿತ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುದೇಶ್ ಎಂಬಿವರು ಈ ತನಿಖಾ ತಂಡದಲ್ಲಿದ್ದರು.

You cannot copy contents of this page