ಪ್ರತೀ ಗ್ರಾಮಗಳಲ್ಲಿ ಕನ್ನಡ ಜಾಗೃತಿ ಮೂಡಿಸುವುದು ಅನಿವಾರ್ಯ ಜಾಗೃತಿ ಸಮಾವೇಶದಲ್ಲಿ ಮೂಡಿಬಂದ ಅಭಿಪ್ರಾಯ

ಕಾಸರಗೋಡು: ಪ್ರತೀ ಗ್ರಾಮಗಳ ಮೂಲಕ ಪಂಚಾಯತ್ ಮಟ್ಟದಲ್ಲಿ ಕನ್ನಡ ಜಾಗೃತಿ ನಡೆಯಬೇಕೆಂಬ ಕರೆಯೊಂದಿಗೆ ರಾಜ್ಯೋತ್ಸವ ದಿನದಂದು ನಗರದಲ್ಲಿ ಕನ್ನಡ ಜಾಗೃತಿ ಸಮಾವೇಶ ನಡೆಸಲಾಯಿತು. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ ಕನ್ನಡ ಭಾಷಾ ಸವಲತ್ತು ಸಂರಕ್ಷಿಸಲ್ಪಡಬೇಕಿದ್ದರೆ ಇದು ಅನಿವಾರ್ಯವೆಂದು ಅಭಿಪ್ರಾಯಪಡಲಾಯಿತು. ಸಮಾವೇಶವನ್ನು ಕರ್ನಾಟಕ ಸಮಿತಿಯ ಹಿರಿಯ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಕುಂಬಳೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಕೇರಳ ಕರ್ನಾಟಕ ಎರಡೂ ಕಡೆ ‘ಕೈ’ ಚಿಹ್ನೆಯ ಸರಕಾರ ಆಡಳಿತ ನಡೆಸುತ್ತಿದ್ದು, ಕಾಸರಗೋಡಿನ ಸಮಸ್ಯೆ ವಿಚಾರದಲ್ಲಿ ಈ ಎರಡೂ ಸರಕಾರಗಳ ಕೈ ಸೇರಿದರೆ ತಕ್ಷಣವೇ ಪರಿಹಾರವಾಗಲಿದೆ. ಆದರೆ ಸರಕಾರಗಳು ಸಮಸ್ಯೆ ಪರಿಹಾರದಲ್ಲಿ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿ ಕನ್ನಡಿಗರು ಜಾಗೃತಿಯ ಮೂಲಕ ಆಸಕ್ತಿ ಮೂಡಿಸಬೇಕು ಎಂದರು.  ಮಹಾಜನ ವರದಿ ಹಳತಾದರೂ ಅಧ್ಯಾಯ ಮುಚ್ಚಿಲ್ಲ. ಅದಿನ್ನೂ ಜೀವಂತವಾಗಿಯೇ ಇದೆ ಎಂದು ನಾರಾಯಣ ಗಟ್ಟಿ ಮಾಸ್ತರ್ ಉಲ್ಲೇಖಿಸಿದರು.

ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು.  ಕೆ. ಭಾಸ್ಕರ ಪ್ರಸ್ತಾಪಿಸಿದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ಸ್ವಾಗತಿಸಿ, ವರಪ್ರಸಾದ್ ಕೋಟೆಕಣಿ ವಂದಿಸಿದರು. ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಾಜೇಂದ್ರ ಕಲ್ಲೂರಾಯ ಎಡನೀರು, ಟಿ. ಶಂಕರನಾರಾಯಣ ಭಟ್, ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ, ಗಣೇಶ್ ಪ್ರಸಾದ್ ಪಾಣೂರು, ಶಿವರಾಮ ಕಾಸರಗೋಡು, ನಿರಂಜನ ಕೊರಕ್ಕೋಡು, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸೂರ್ಯಭಟ್  ಎಡನೀರು, ಮುಹಮ್ಮದಾಲಿ ಪೆರ್ಲ, ಆಯಿಷಾ ಪೆರ್ಲ, ಲೋಕೇಶ್ ಎಂ.ಬಿ. ಆಚಾರ್ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page