ಕಾಸರಗೋಡು: ಸೋಶ್ಯಲ್ ಮೀಡಿಯಾದ ಮೂಲಕ ಶೇರ್ ಮಾರ್ಕೆಟ್‌ಗೆ ಸಂಬಂಧಿಸಿದ ತರಗತಿಗಳನ್ನು ನೀಡಿ ಬಳಿಕ ಹಲವು ರೀತಿಯ ಅಗತ್ಯಗಳ ನೆಪವೊಡ್ಡಿ ಹಣ ಎಗರಿಸಿದ ಪ್ರಕರಣದ ಓರ್ವನನ್ನು ಕಾಸರಗೋಡು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ವಲಿಯಪರಂಬ ಇಡಯಿಲ್ಲಾಕಾಟ್ ನಿವಾಸಿಯೋರ್ವರಿಂದ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 20.13 ಲಕ್ಷ ರೂ. ಎಗರಿಸಿದ ನಾಲ್ವರು ಆರೋಪಿಗಳ ಪೈಕಿ ಓರ್ವನಾದ ಆಲಪ್ಪುಳ ಅಂಬಲಪ್ಪುಳ ಕಾರೂರು ನಿವಾಸಿ ಜಿ. ಬಿಜು ಕುಮಾರ್ (54) ಬಂಧಿತ ಆರೋಪಿ. ಹೀಗೆ ವಂಚಿಸಿದ ಹಣದಲ್ಲಿ ಮೂರು ಲಕ್ಷ ರೂ. ಬಿಜು ಕುಮಾರ್‌ನ ಮಾಲಕತ್ವದಲ್ಲಿರುವ ಬಿ.ಜಿ. ಮೆನೊನ್ ಆಂಡ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯ ಹೆಸರಲ್ಲಿರುವ ಆಲಪ್ಪುಳದ ಖಾಸಗಿ ಬ್ಯಾಂಕ್‌ವೊಂದರ ಖಾತೆಗೆ ಬಂದು ಸೇರಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಬಿಪಿಐ ಎಂಬ ಆನ್‌ಲೈನ್ ಆಪ್ ಮೂಲಕ ಶೇರ್ ಟ್ರೇಡಿಂಗ್ ನಡೆಸುವ ಹೆಸರಲ್ಲಿ ಈ ರೀತಿ ಆರೋಪಿಗಳು ಹಲವರಿಂದ ಹಣ ಎಗರಿಸಿ ವಂಚನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲವರಿಂದ ಹಲವುಬಾರಿಯಾಗಿ ಈ ನಾಲ್ವರು ಆರೋಪಿಗಳು ಹಣ ಎಗರಿಸಿರುವುದಾಗಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಮೇಲ್ನೋಟ ವಹಿಸುತ್ತಿರುವ ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದಲ್ಲಿ ಸೈಬರ್ ಪೊಲೀಸ್ ಠಾಣೆಯ ಎಸ್‌ಐ ರವೀಂದ್ರನ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಾದ ರಂಜಿತ್ ಕುಮಾರ್, ಪ್ರಶಾಂತ್ ಮತ್ತು ದಿಲೀಶ್ ಎಂಬವರನ್ನೊಳಗೊಂದ ತಂಡ ಈ ಆರೋಪಿಯನ್ನು ಬಂಧಿಸಿದೆ.