ಸಿಪಿಎಂ ನೇತಾರೆಯಾದ ಯುವ ನ್ಯಾಯವಾದಿಯ ಸಾವು : ಮುಂದುವರಿದ ನಿಗೂಢತೆ; ತಲೆಮರೆಸಿಕೊಂಡ ನ್ಯಾಯವಾದಿಯ ಪತ್ತೆಗಾಗಿ ಶೋಧ, ಮೊಬೈಲ್‌ಫೋನ್ ಕೇಂದ್ರ ಫಾರೆನ್ಸಿಕ್ ಲ್ಯಾಬ್‌ಗೆ

ಕುಂಬಳೆ: ಸಿಪಿಎಂ ಲೋಕಲ್ ಕಮಿಟಿ ಸದಸ್ಯೆ, ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ಕುಂಬಳೆ ವಿಲ್ಲೇಜ್ ಸೆಕ್ರೆಟರಿ, ಡಿವೈಎಫ್‌ಐ ವಲಯ ಅಧ್ಯಕ್ಷೆಯೂ, ಕಾಸರಗೋಡು ಬಾರ್‌ನ ಯುವ ನ್ಯಾಯವಾದಿಯೂ ಆಗಿದ್ದ ಸಿ. ರಂಜಿತ ಕುಮಾರಿ(30)ಯವರ ಸಾವಿನ ಬಗ್ಗೆ ನಿಗೂಢತೆ ಮುಂದುವರಿಯುತ್ತಿದೆ.  ಸಾವಿಗೆ ಕಾರಣವನ್ನು ಪತ್ತೆಹಚ್ಚಬೇಕೆಂದು  ಒತ್ತಾಯಿಸಿ ಸಿಪಿಎಂ ಸಹಿತ ವಿವಿಧ ಸಂಘಟನೆಗಳು  ರಂಗಕ್ಕಿಳಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬೇರಿಕೆ ಕಡಪ್ಪುರದ ಕೃತೇಶ್ ಎಂಬವರ ಪತ್ನಿಯಾದ ರಂಜಿತ  ಮಂಗಳವಾರ  ಕುಂಬಳೆಯಲ್ಲಿರುವ ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯವರು ಹಲವು ಬಾರಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿ ನೋಡಿದಾಗ ಬಾಗಿಲಿಗೆ ಚಿಲಕಹಾಕಿದ ಸ್ಥಿತಿಯಲ್ಲಿತ್ತು. ವಿಷಯ ತಿಳಿದು ಪೊಲೀಸರು ತಲುಪಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿ ನೋಡಿದಾಗ ರಂಜಿತ ನೇಣು ಬಿಗಿದಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೊಠಡಿಯೊಳಗೆ ಆತ್ಮಹತ್ಯೆ ಕುರಿತಾಗಿ ಬರೆದಿಟ್ಟ ಪತ್ರವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಲ್ಲಿ ‘ಸಾಯುತ್ತೇನೆ’ ಎಂಬುದಾಗಿ ಬರೆದಿರುವುದಾಗಿ ತಿಳಿದುಬಂದಿದೆ. ತನಿಖೆಯಂಗವಾಗಿ ರಂಜಿತರ ಮೊಬೈಲ್ ಫೋನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ರಂಜಿತ ಸಾವಿಗೀಡಾಗುವ ಸ್ವಲ್ಪ ಮೊದಲು  ವೀಡಿಯೋ ಕರೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ಮೊಬೈಲ್ ಫೋನ್ ತಿರುವಂತಪುರದಲ್ಲಿರುವ ಕೇಂದ್ರ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿರುವುದಾಗಿ ಹೇಳಲಾಗುತ್ತಿದೆ. ಫೋನ್‌ನಲ್ಲಿರುವ ಮಾಹಿತಿಗಳು ಲಭಿಸುವುದರೊಂದಿಗೆ ರಂಜಿತರ ಸಾವಿಗೆ ಕಾರಣವೇನೆಂದು ಬಹಿರಂಗಗೊಳ್ಳಲಿದೆಯೆಂದು ಪೊಲೀಸರು ನಿರೀಕ್ಷೆಯಿರಿಸಿದ್ದಾರೆ. ಇದೇ ವೇಳೆ ರಂಜಿತರೊಂದಿಗೆ  ಹತ್ತಿರದ ಸಂಬಂಧವಿರಿಸಿದ್ದ  ಓರ್ವ ನ್ಯಾಯವಾದಿ ಊರಿನಿಂದ ತಲೆಮರೆಸಿಕೊಂಡಿರುವುದಾಗಿ ಪೊಲೀಸರಿಗೆ  ಮಾಹಿತಿ ಲಭಿಸಿದೆ. ರಂಜಿತರ ಸಾವಿನ ಬಳಿಕ ಪ್ರಸ್ತುತ ನ್ಯಾಯವಾದಿ ರೈಲುಗಾಡಿಯಲ್ಲಿ ಪ್ರಯಾಣಿಸಿರುವುದಾಗಿಯೂ ಪೊಲೀಸರಿಗೆ ಸೂಚನೆ ಲಭಿಸಿದೆ. ಹತ್ತಿರದ ಸಂಬಂಧವಿದ್ದರೂ ರಂಜಿತರ ಮೃತದೇಹವನ್ನು ನೋಡಲು ಪ್ರಸ್ತುತ ನ್ಯಾಯವಾದಿ ಯಾಕಾಗಿ ಬರಲಿಲ್ಲ್ಲವೆಂಬ ಸಂಶಯವು ಹುಟ್ಟಿಕೊಂಡಿದೆ.  ರಂಜಿತರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸಿಪಿಎಂ ಲೋಕಲ್ ಕಮಿಟಿ  ರಂಗಕ್ಕಿಳಿದಿದೆ.

RELATED NEWS

You cannot copy contents of this page