ಧರ್ಮ ಸಂದೇಶ ಯಾತ್ರೆಗೆ ನಾಳೆ : ಕಾಸರಗೋಡಿನಿಂದ ಚಾಲನೆ

ಕಾಸರಗೋಡು: ಮಾರ್ಗದರ್ಶಕ ಮಂಡಳಿ ಕೇರಳ ಇದರ ಆಶ್ರಯದಲ್ಲಿ ಸನ್ಯಾಸಿಗಳು ನೇತೃತ್ವ ನೀಡುವ ಧರ್ಮ ಸಂದೇಶ ಯಾತ್ರೆ ನಾಳೆ ಕಾಸರಗೋಡಿ ನಿಂದ ಪ್ರಯಾಣ ಆರಂಭಿಸಲಿದೆ. ಕಾಸರಗೋಡಿನಿಂದ ತಿರುವನಂತಪುರ ತನಕ ಪ್ರಯಾಣ ನಡೆಸಲಿರುವ ಈ ಯಾತ್ರೆಯ ಉದ್ಘಾಟನೆ ನಾಳೆ ಅಪರಾಹ್ನ ೩ ಗಂಟೆಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯಲಿದೆ. ಕೊಳತ್ತೂರು ಅದ್ವೈತಂ ಆಶ್ರಮದ ಮಠಾಧೀಶ ಹಾಗೂ ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷರೂ ಆಗಿರುವ ಸ್ವಾಮಿ ಚಿದಾನಂದಪುರಿ ಪ್ರಧಾನ ಭಾಷಣಗಾರರಾಗಿ ಮಾತನಾಡಲಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಚಿನ್ಮಯ ಮಿಶನ್‌ನ ಶ್ರೀ ವಿವಿಕ್ತಾನಂದ ಸರಸ್ವತ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸುವರು. ಯಾತ್ರೆ ಅಕ್ಟೋಬರ್ 21ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಲಿದೆ.

ಯಾತ್ರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅದ್ದೂರಿಯ ಸ್ವಾಗತ ನೀಡಲಾಗುವುದೆಂದು ಈ ಪ್ರಯುಕ್ತ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮಿ ಸ್ವರೂಪಾನಂದ, ವಿವಿಕ್ತಾನಂದ ಸರಸ್ವತಿ ಸ್ವಾಮಿ, ಸಾಧು ವಿನೋದ್,  ಸ್ವಾಮಿ ತತ್ವಾನಂದ ಸರಸ್ವತಿ, ವೇದವೇದಾಂಮೃತಾನಂದ ಚೈತನ್ಯ, ಬ್ರಹ್ಮಕುಮಾರಿ ವಿಜಯಲಕ್ಷ್ಮಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಸ್ವಾಗತ ಸಂಘದ ಅಧ್ಯಕ್ಷ ಮಧುಸೂದನನ್ ನಾಯರ್ ಮೊದಲಾದವರು ತಿಳಿಸಿದ್ದಾರೆ. ಮಂಗಳೂರು ಕುದ್ರೋಳಿ ದೇವಸ್ಥಾನದಿಂದ ಈ ಯಾತ್ರೆಗಿರುವ ದೀಪವನ್ನು ಇಂದು ಬೆಳಗಿಸಿ ವಿವಿಧ ಮಠಗಳ ಮಠಾಧೀಶರ ನೇತೃತ್ವದಲ್ಲಿ ಕೇರಳಕ್ಕೆ ತರಲಾಗುವುದು. ಇಂದು ಸಂಜೆ 5 ಗಂಟೆಗ ತಲಪ್ಪಾಡಿ ಗಡಿಯಲ್ಲಿ ಅದಕ್ಕೆ ಅದ್ದೂರಿಯ ಸ್ವಾಗತ ನೀಡಲಾಗುವುದು.  ಅಲ್ಲಿಂದ ಮಧೂರು  ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ತಲುಪಿಸಲಾಗುವುದು. ಬಳಿಕ ನಾಳೆ ಬೆಳಿಗ್ಗೆ 9 ಗಂಟೆಗೆ ವಿದ್ಯಾನಗರದ ಚಿನ್ಮಯ ವಿದ್ಯಾಲಯಕ್ಕೆ ತಂದು 10 ಗಂಟೆಗೆ ಅಲ್ಲಿನ ಸಿಬಿಸಿ ಸಭಾಂಗಣದಲ್ಲಿ ಹಿಂದೂ ನೇತೃತ್ವ ಸಮ್ಮೇಳನ ನಡೆಯಲಿದೆ. ನಂತರ ಅಪರಾಹ್ನ 2.30ಕ್ಕೆ ದೀಪವನ್ನು ನಗರದ ಕರಂದಕ್ಕಾಡಿಗೆ ತಲುಪಿಸಿ  ನೂರಾರು ಸನ್ಮಾಸಿಗಳು ಪಾಲ್ಗೊಂಡ ಮೆರವಣಿಗೆಯಲ್ಲಿ ಮುತ್ತುಕೊಡೆ ಮತ್ತು ವಾದ್ಯಘೋಷಗಳೊಂದಿಗೆ ತಾಳಿಪಡ್ಪು ಮೈದಾನಕ್ಕೆ ಸಾಗಿಸಲಾಗುವುದು. ನಂತರ ಯಾತ್ರೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.

RELATED NEWS

You cannot copy contents of this page