ತಿರುವನಂತಪುರ: ಶಬರಿಮಲೆ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಸ್ಥಾಪಿಸಲಾಗಿರುವ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕದಲ್ಲಿ 4.5 ಕೆ.ಜಿ ಕಡಿಮೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆ ವಿಷಯದ ಬಗ್ಗೆ ಸದನದ ಇಂದಿನ ಎಲ್ಲಾ ಕಾರ್ಯಕಲಾಪಗಳನ್ನು ಬದಿಗಿರಿಸಿ ಸಮಗ್ರ ಚರ್ಚೆ ನಡೆಸಬೇಕೆಂದು ಮಾಜಿ ಸಚಿವ ತಿರುವಾಂಜೂರು ರಾಧಾಕೃಷ್ಣನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ತುರ್ತು ಗೊತ್ತುವಳಿ ಮಂಡಿಸಿದರು. ಆದರೆ ಈ ವಿಷಯ ಈಗ ಹೈಕೋ ರ್ಟ್‌ನ ಪರಿಗಣನೆಯಲ್ಲಿರುವುದರಿಂ ದಾಗಿ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚಿಸುವಂತಿಲ್ಲವೆಂದು ಹೇಳಿ ಸಭಾಧ್ಯಕ್ಷ ಎ.ಎನ್ ಸಂಶೀರ್ ಗೊತ್ತುವಳಿ ಮಂಡನೆಗೆ ಅನುಮತಿ ನಿರಾಕರಿಸಿದರು. ಇದರಿಂದ ಆಕ್ರೋಶಿತರಾದ ವಿಪಕ್ಷೀಯರು ಸಭಾಧ್ಯಕ್ಷರ ನಿಲುವನ್ನು ಪ್ರತಿಭಟಿಸಿ ಸಭಾತ್ಯಾಗ ನಡೆಸಿದರು.
ಶಬರಿಮಲೆ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿ ಚಿನ್ನದ ತೂಕದ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಿರುವಿದಾಂಕೂರು ಮುಜರಾಯಿ ಮಂಡಳಿಯ ಭದ್ರತಾ ಅಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ನಿರ್ದೇಶ ನೀಡಿದೆ. ಮಾತ್ರವಲ್ಲ ಆ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಇನ್ನೊಂದೆಡೆ ವಿಚಾರಣೆ ಆರಂಭಿಸಿದೆ. ಇದು ಮುಜರಾಯಿ ಮಂಡಳಿಯನ್ನು ತೀವ್ರ ಮುಜುಗರಕ್ಕೊಳಪಡಿಸುವಂತೆ ಮಾಡಿದೆ. ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದ್ದನ್ನು ದೇವಸ್ಥಾನ ಮಂಡಳಿಯು ಯಾಕೆ ದಾಖಲು ಮಾಡಿಲ್ಲವೆಂದೂ ನ್ಯಾಯಾಲಯ ಮಂಡಳಿಯನ್ನು ಪ್ರಶ್ನಿಸಿದೆ.
2016ರಲ್ಲಿ ಈ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕಾಗಿ ಚೆನ್ನೈ ಕಂಪೆನಿಯೊಂದಕ್ಕೆ ನೀಡಲಾಗಿತ್ತು. ಆ ವೇಳೆ ಚಿನ್ನದ ತೂಕವು 42.8 ಕೆಜಿ ಆಗಿತ್ತು. ಕವಚ ತೆಗೆದಿಟ್ಟ ಸುಮಾರು 1 ತಿಂಗಳು 9 ದಿನಗಳ ಬಳಿಕ ಅದನ್ನು ಕಂಪೆನಿಗೆ ನೀಡಲಾಗಿತ್ತು. ಆ ಹೊತ್ತಿಗೆ ಚಿನ್ನದ ತೂಕವು 38.24 ಕೆಜಿಯ ಷ್ಟಾಗಿದೆಯೆಂದು ಹೇಳಲಾಗುತ್ತಿದೆ.