ತಿರುವನಂತಪುರ: ರಾಜ್ಯ ವಿಧಾನಸಭಾ ಅಧಿವೇಶನ ಸೋಮವಾರ ಆರಂಭಗೊಳ್ಳಲಿರುವಂತೆಯೇ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲ್ಪಟ್ಟ ಶಾಸಕ ರಾಹುಲ್ ಮಾಕೂಟತ್ತಿಲ್ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ತೀವ್ರ ಅಪಸ್ವರ ಭುಗಿಲೆದ್ದಿದೆ. ರಾಜಕೀಯ ವಿಷಯ ಅಡಗಿದ್ದರೂ ರಾಹುಲ್ ವಿರುದ್ಧ ಒಂದಕ್ಕಿಂತ ಹೆಚ್ಚು ಯುವತಿಯರು ದೂರು ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ವಿಧಾನಸಭೆಗೆ ಆಗಮಿಸಿದ್ದಲ್ಲಿ ಅದನ್ನು ಆಡಳಿತ ಪಕ್ಷದವರು ಒಂದು ಪ್ರಧಾನ ವಿಷಯವನ್ನಾಗಿ ರಾಹುಲ್‌ನ ವಿರುದ್ಧ ಮಾತ್ರವಲ್ಲ, ಕಾಂಗ್ರೆಸ್‌ನ ಮೇಲೂ ಮುಗಿಬೀಳುವ ಸಾಧ್ಯತೆಯಿದೆ.
ಇದರಿಂದಾಗಿ ರಾಹುಲ್ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಬೇಡ ಎಂಬ ನಿಲುವನ್ನು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ರಾಹುಲ್‌ರನ್ನು ಪಕ್ಷದಿಂದ ಅಮಾನತುಗೊಳಿಸಿದ ವಿಷಯವನ್ನು ಸತೀಶನ್ ಅವರು ವಿಧಾನಸಭಾ ಅಧ್ಯಕ್ಷರಿಗೆ ಲಿಖಿತ ರೂಪದಲ್ಲೂ ಸಲ್ಲಿಸಿದ್ದಾರೆ. ಪಕ್ಷದಿಂದ ಅಮಾನತುಗೊಳಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ರಾಹುಲ್ ವಿಧಾನಸಭೆ ಯಲ್ಲಿ ಇನ್ನು ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಅದರಿಂದಾಗಿ ಅವರಿಗೆ ಪ್ರತ್ಯೇಕ ಆಸನ ನೀಡಬೇಕಾಗಿ ಬರಲಿದೆ. ಶಾಸಕ ಎಂಬ ನೆಲೆಯಲ್ಲಿ ರಾಹುಲ್ ವಿಧಾನಸಭೆಗೆ ಬರುವುದಕ್ಕೆ ಯಾವುದೇ ರೀತಿಯ ಅಡಚಣೆ ಇಲ್ಲವಾದರೂ ವಿಧಾನಸಭೆಗೆ ಬರಬೇಕೇ ಎಂಬುದನ್ನು ಅವರು ಸ್ವತಃ ನಿರ್ಧರಿಸಬೇಕೆಂದು ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.