ಜಿಲ್ಲಾ ಶಾಲಾ ಕಲೋತ್ಸವಕ್ಕೆ ಔಪಚಾರಿಕ ಚಾಲನೆ: ಮೊಗ್ರಾಲ್‌ನಲ್ಲಿನ್ನು ನಾದ-ತಾಳ-ನೃತ್ಯ ವಿಸ್ಮಯ

ಮೊಗ್ರಾಲ್: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. ಇನ್ನು ಮೂರು ದಿನಗಳು ಮೊಗ್ರಾಲ್‌ನ ಇಶಲ್ ಗ್ರಾಮದಲ್ಲಿ ರಾಗ ತಾಳ ನೃತ್ಯ ವಿಸ್ಮಯ ಸಹಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೆರೆಯಲಿದ್ದಾರೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರಗಿತು. ಈ ತಿಂಗಳ ೩೧ರಂದು ಸಂಜೆ ಸಮಾರೋಪ ನಡೆಯಲಿದೆ.

ವಿವಿಧ ಕಲಾ ಸಾಂಸ್ಕೃತಿಕ ವೈಭವಗಳಿಂದ ಶಾಲಾ ಕಲೋತ್ಸವದ ಡಂಗುರ ಜಾಥಾ ಜರಗಿತು. ಕುಂಬಳೆಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಫ್ಲ್ಲಾಗ್‌ಆಫ್ ನಡೆಸಿದರು. ಕಥಕ್ಕಳಿ, ಒಪ್ಪನ, ದಫ್‌ಮುಟ್ ಮೊದಲಾದ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ದೃಶ್ಯಗಳು ಮೆರವಣಿಗೆಯಲ್ಲಿ ಕಂಡುಬಂತು. ಜ್ಯೂನಿಯರ್ ರೆಡ್‌ಕ್ರಾಸ್ ಕೆಡೆಟ್‌ಗಳು, ಜನಪ್ರತಿನಿಧಿಗಳು, ಸ್ಥಳೀಯರು ಭಾಗವಹಿಸಿದರು.

ಮಾಪಿಳ್ಳಪಾಟ್‌ನ ಊರಾದ ಮೊಗ್ರಾಲ್ ಶಾಲಾ ಕಲೋತ್ಸವದಲ್ಲಿ ಮೊದಲ ದಿನವೇ ಒಪ್ಪನ ಹಾಗೂ ವಟ್ಟಪ್ಪಾಟ್, ದಫ್‌ಮುಟ್ ನಡೆಯಲಿದೆ. ೧ನೇ ವೇದಿಕೆಯಲ್ಲಿ ಬೆಳಿಗ್ಗೆ ವಟ್ಟಪ್ಪಾಟ್ ಆರಂಭಗೊಂಡಿತು. ಬಳಿಕ ದಫ್‌ಮುಟ್, ವೃಂದವಾದ್ಯ, ಅಪರಾಹ್ನ ಒಪ್ಪನ ಸ್ಪರ್ಧೆ ನಡೆಯಲಿದೆ. ೨ನೇ ವೇದಿಕೆಯಲ್ಲಿ ಬೆಳಿಗ್ಗೆ ಪರಿಚಮುಟ್, ಚವಿಟ್ಟು ನಾಟಕ, ಮಂಗಳಂಕಳಿ ನಡೆಯಲಿದೆ. 3ನೇ ವೇದಿಕೆಯಲ್ಲಿ ಬೆಳಿಗ್ಗೆ ಭರತನಾಟ್ಯ ಬಳಿಕ ತಿರುವಾದಿರ ಪ್ರದರ್ಶನಗೊಳ್ಳಲಿದೆ. 238 ಸ್ಪರ್ಧೆಗಳಲ್ಲಾಗಿ ಭಾಗವಹಿಸಲು 3953 ವಿದ್ಯಾರ್ಥಿಗಳು ತಲುಪುತ್ತಾರೆ. ಯುಪಿ ವಿಭಾಗದಲ್ಲಿ 1118, ಎಚ್‌ಎಸ್ ವಿಭಾಗದಲ್ಲಿ 1404, ಎಚ್‌ಎಸ್‌ಎಸ್ ವಿಭಾಗದಲ್ಲಿ 1421 ಮಂದಿ ಸ್ಪರ್ಧಿಸುತ್ತಿದ್ದಾರೆ. ಯುಪಿ ವಿಭಾಗದಲ್ಲಿ ಅರೆಬಿಕ್ 10, ಸಂಸ್ಕೃತ 10, ಜನರಲ್ 31, ಹೈಸ್ಕೂಲ್ ವಿಭಾಗದಲ್ಲಿ ಅರೆಬಿಕ್ 12, ಸಂಸ್ಕೃತ 14, ಜನರಲ್ 80, ಎಚ್‌ಎಸ್‌ಎಸ್ ವಿಭಾಗದಲ್ಲಿ ಜನರಲ್ 81 ಸ್ಪರ್ಧೆಗಳಿವೆ. ವೇದಿಕೇತರ ಸ್ಪರ್ಧೆಗಳು ಈ ಮೊದಲೇ ಪೂರ್ತಿಯಾಗಿದೆ.

ಯಕ್ಷಗಾನ ಸ್ಪರ್ಧೆಗಳು 31ರಂದು ನಡೆಯಲಿದೆ. ಕಲೋತ್ಸವದಲ್ಲಿ ಭಾಗವಹಿಸುವವರಿಗೆ ಪ್ರತಿದಿನ ಬೆಳಿಗ್ಗೆ 25೦೦ ಮಂದಿಗೆ ಬೆಳಿಗ್ಗಿನ ಆಹಾರ ಹಾಗೂ ಮೊದಲ ದಿನದಲ್ಲಿ ಮಧ್ಯಾಹ್ನ 56೦೦ ಮಂದಿಗೆ, ಎರಡನೇ ದಿನ 5೦೦೦ ಮಂದಿಗೆ ಹಾಗೂ ಮೂರನೇ ದಿನದಂದು 7೦೦೦ ಮಂದಿಗೆ ಮಧ್ಯಾಹ್ನದೂಟ ವಿತರಣೆ ನಡೆಯಲಿದೆ. ಕಲೋತ್ಸವಕ್ಕೆ ಸರಕಾರ 19 ಲಕ್ಷ ರೂ. ನೀಡಿದೆ. ಇದರ ಒಟ್ಟು ವೆಚ್ಚ 40ರಿಂದ 50 ಲಕ್ಷ ರೂ. ತನಕ ಉಂಟಾಗಲಿದೆ ಎಂದು ಶಿಕ್ಷಣ ಇಲಾಖೆಗೆ ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page