ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಪ್ಪಳ ಬಾಲಕುಂಡ ನಿವಾಸಿ ಮುಹಮ್ಮದ್ ರಫೀಕ್ (43) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಈತ ಸೆರೆಗೀಡಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಾಗಿದ್ದ ಈತನ ಕೈಯಲ್ಲಿದ್ದ 20 ಗ್ರಾಂ ಗಾಂಜಾ ಹಾಗೂ 1.79 ಗ್ರಾಂ ಮೆಥಾಫಿಟಮಿನ್‌ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸಿ. ಸಂತೋಷ್ ಕುಮಾರ್, ಸಿವಿಲ್ ಎಕ್ಸೈಸ್ ಆಫೀಸರ್ ಎ.ಕೆ. ನಸರುದ್ದೀನ್, ಪ್ರಿವೆಂಟಿವ್ ಆಫೀಸರ್ ಕೆ.ಆರ್. ಪ್ರಜೀತ್, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎ.ಬಿ. ಅಬ್ದುಲ್ಲ ಎಂಬಿವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಆರೋಪಿ ಹಾಗೂ ವಶಪಡಿಸಿಕೊಂಡ ಮಾದಕವಸ್ತುಗಳನ್ನು ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಅಂತರ್‌ರಾಜ್ಯ ಬಸ್‌ಗಳಲ್ಲೂ, ಕರ್ನಾಟಕ ಗಡಿ ಪ್ರದೇಶದಿಂದ ಸಂಚರಿಸುವ ಬಸ್‌ಗಳಲ್ಲೂ ಮಾದಕ ವಸ್ತು ಸಾಗಾಟ ನಡೆಯುತ್ತಿದೆ ಎಂಬ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ತೀವ್ರಗೊಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಮಾತ್ರ ಆರು ಮಾದಕವಸ್ತು ಪ್ರಕರಣಗಳು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






