ಕಾಸರಗೋಡು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್‌ಟಿಎ) ನೇತೃತ್ವದ ಸಾರ್ವತ್ರಿಕ ಶಿಕ್ಷಣ ಪರಿವರ್ತನೆ ಸಂದೇಶ ಯಾತ್ರೆ ನಿನ್ನೆ ಚೆರ್ಕಳದಿಂದ ಪ್ರಯಾಣ ಆರಂಭಿಸಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಲಿರುವ ಈ ಯಾತ್ರೆ ಸೆಪ್ಟಂಬರ್ 27ರಂದು ತಿರುವನಂತಪುರದಲ್ಲಿ ಸಮಾಪ್ತಿ ಹೊಂದಲಿದೆ.
ಚೆರ್ಕಳದಿಂದ ನಿನ್ನೆ ಆರಂಭಗೊಂಡ ಯಾತ್ರೆಯನ್ನು ಕಾಂಗ್ರೆಸ್‌ನ ರಾಜ್ಯ ಕಾರ್ಯನಿರ್ವಹಣಾಧ್ಯಕ್ಷ ಸಂಸದ ಶಾಫಿ ಪರಂಬಿಲ್ ಸಂದೇಶಯಾತ್ರೆಯ ನಾಯಕ ಕೆ.ಪಿ.ಎಸ್.ಟಿ.ಎ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಮಜೀದ್‌ರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯದ ಕೆಲವು ಪೊಲೀಸರು ಸಿಪಿಎಂನ ಗೂಂಡಾಗಳಾಗಿ ಮಾರ್ಪಟ್ಟಿದ್ದಾರೆಂದೂ ಮುಖ್ಯಮಂತ್ರಿ ಯವರು ಅದಕ್ಕೆ ಮೌನಾನುಮತಿ ನೀಡುತ್ತಿದ್ದಾರೆಂದು ಶಾಫಿ ಪರಂಬಿಲ್ ಆರೋಪಿಸಿದರು. ಕೆ. ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಪ್ರಧಾನ ಭಾಷಣ ಮಾಡಿದರು. ಯುಡಿಎಫ್ ಜಿಲ್ಲಾ ಅಧ್ಯಕ್ಷ ಮಾಹಿನ್ ಕಲ್ಲೆಟ್ರಾ, ಕೆ.ಪಿ.ಎಸ್.ಟಿ.ಎ. ಪ್ರಧಾನ ಕಾರ್ಯದರ್ಶಿ ಪಿ.ಕೆ. ಅರವಿಂದನ್, ಹಕ್ಕಿಂ ಕುನ್ನಿಲ್, ಪಿ. ಹರಿಗೋ ವಿಂದನ್, ವಟ್ಟಪ್ಪಾರ ಅನಿಲ್, ಸಿ.ವಿ. ಜೇಮ್ಸ್, ಜಿ.ಕೆ. ಗಿರೀಶ್, ಪಿ.ಟಿ. ಬೆನ್ನಿ, ಕೆ. ಗೋಪಾಲಕೃಷ್ಣನ್, ಬಿ. ಸುನಿಲ್ ಕುಮಾರ್, ಎನ್. ರಾಜ್‌ಮೋಹನ್ ಮೊದಲಾದವರು ಮಾತನಾಡಿದರು.