ಕಾಸರಗೋಡು: ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಗು ಮೃತಪಟ್ಟಿದೆ. ಉಳಿಯತ್ತಡ್ಕ ನಿವಾಸಿ ಪ್ರಭಾಕರನ್-ಅನುಷ ದಂಪತಿಯ ಏಕ ಪುತ್ರ ಪಿ. ಪ್ರನೂಶ್ (8) ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ ಶುಕ್ರವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿತ್ತು. ಬೇಳ ಸೈಂಟ್ ಮೆರೀಸ್ ಹೈಸ್ಕೂಲ್‌ನ ವಿದ್ಯಾರ್ಥಿ ಯಾಗಿದ್ದಾನೆ. ಈ ಶಾಲೆಯಲ್ಲಿ ತಾಯಿ ಅನುಷ ಅಧ್ಯಾಪಿಕೆಯಾಗಿದ್ದಾರೆ.
ಶುಕ್ರವಾರ ಸಂಜೆ ಪ್ರಭಾಕರನ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಅನುಷಾ ಹಾಗೂ ಪ್ರನೂಶ್ ಸಹ ಸವಾರರಾಗಿದ್ದರು. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಕಟ್ಟದಂಗಡಿ ತಿರುವಿನಲ್ಲಿ ಎದುರುಭಾಗದಿಂದ ಇನ್ನೊಂದು ವಾಹನ ಆಗಮಿಸಿದ್ದು, ಪ್ರಭಾಕರನ್ ಸ್ಕೂಟರನ್ನು ದಿಢೀರಾಗಿ ನಿಲ್ಲಿಸಿದಾಗ ಪ್ರನೂಶ್ ಸ್ಕೂಟರ್‌ನಿಂದ ಎಸೆಯಲ್ಪಟ್ಟಿದ್ದನು. ವಿದ್ಯಾರ್ಥಿಯ ಮರಣ ನಾಡು ಹಾಗೂ ಶಾಲೆಯಲ್ಲಿ ದುಃಖ ಸಾಗರ ಸೃಷ್ಟಿಸಿದೆ.