ಕಾಸರಗೋಡು: ವೃದ್ಧನೋರ್ವನನ್ನು ತಲೆಗೆ ಹೊಡೆದು ಬರ್ಭರವಾಗಿ ಕೊಲೆಗೈದ ಘಟನೆ ನಡೆದಿದೆ.
ಹೊಸದುರ್ಗ ಸಮೀಪದ ಕರಿಂದಳಂ ಕುಂಬಳಪ್ಪಳ್ಳಿ ಚಿಟ್ಟೆಮೂಲೆಯ ಉನ್ನತ್ತೀಲೆ ಕೆ. ಕಣ್ಣನ್ (80) ಕೊಲೆಗೀಡಾದ ವ್ಯಕ್ತಿ. ಇದಕ್ಕೆ ಸಂಬಂಧಿಸಿ ಮೃತ ಕಣ್ಣನ್‌ರ ಸಂಬಂಧಿಕ ಹಾಗೂ ನೆರೆಮನೆ ನಿವಾಸಿಯೂ ಆಗಿರುವ ಕೆ. ಶ್ರೀಧರನ್ (45) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಸಂಜೆ ಕಣ್ಣನ್‌ರನ್ನು ಅವರ ಮನೆಯಲ್ಲೇ ತಲೆಯ ಹಿಂಭಾಗಕ್ಕೆ ಹೊಡೆದು ಗಂಭೀರ ಗಾಯಗೊಳಿ ಲಾಗಿದೆ. ಅದನ್ನು ಕಂಡ ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಕೊಲೆ ಆರೋಪಿ ಶ್ರೀಧರನ್ ಈ ಹಿಂದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದನೆಂದೂ ಆ ಪರಿಸರದವರು ತಿಳಿಸಿದ್ದಾರೆ. ಈ ಹಿಂದೆ ನೆರೆಮನೆಯೋರ್ವರ ಮನೆ ಮೇಲೇರಿದ ಶ್ರೀಧರನ್ ತನಗೆ ತಿನ್ನಲು ಬೀಫ್ ಮತ್ತು ಪರೋಟ ನೀಡಬೇಕೆಂದೂ ಇಲ್ಲವಾದಲ್ಲಿ ತಾನು ಕೆಳಗೆ ಬೀಳುವುದಾಗಿ ಬೆದರಿಕೆಯೊಡ್ಡಿದ್ದರು. ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕದಳ ಆಗಮಿಸಿ ಆತನನ್ನು ರಕ್ಷಿಸಿದ್ದರೆಂದು ನೆರೆಮನೆಯವರು ತಿಳಿಸಿದ್ದಾರೆ. ಕಣ್ಣನ್‌ರನ್ನು ಕೊಲೆಗೈದ ಕಾರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಕಣ್ಣನ್ ಪತ್ನಿ ಪುತ್ತರಿಚ್ಚಿ, ಮಕ್ಕಳಾದ ಶಶಿ, ಚಂದ್ರನ್, ಜಯನ್,ಸಹೋದರಿ ಶಾರದ, ಸೊಸೆಯಂದಿರಾದ ರಾಧಾಮಣಿ, ಬೇಬಿ, ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.