ಮಂಜೇಶ್ವರ: ಕಳೆದ ಬಾರಿಯ ತ್ರಿಸ್ತರ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌ನ ಮಂಜೇಶ್ವರ ಡಿವಿಶನ್‌ನಿಂದ 2384 ಮತಗಳ ಅಂತರದಲ್ಲಿ ಐಕ್ಯರಂಗದ ಗೋಲ್ಡನ್ ಅಬ್ದುಲ್ ರಹಿಮಾನ್ ಜಯಗಳಿಸಿದ ಮಂಡಲದಲ್ಲಿ ಈ ಬಾರಿ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಕಳೆದ ಬಾರಿ ಗೋಲ್ಡನ್ ಅಬ್ದುಲ್ ರಹಿಮಾನ್ 14,998 ಮತ ಗಳಿಸಿದ್ದರೆ, ಬಿಜೆಪಿಯ ಕೆ.ಎಲ್. ಪುಷ್ಪರಾಜ್ 12,699, ಸಿಪಿಎಂನ ಸಾದಿಕ್ ಚೆರುಗೋಳಿ 11,924 ಮತಗಳಿಸಿದ್ದರು. ಜೊತೆಗೆ ಎಸ್‌ಡಿಪಿಐ ಯಿಂದ ಇಕ್ಬಾಲ್ ಹೊಸಂಗಡಿ (1692), ಪಿಡಿಪಿಯ ಸುಬೈರ್ ಪಡ್ಪು (302) ಮತ ಗಳಿಸಿದ್ದರು. ಈ ಬಾರಿ ಈ ಮಂಡಲ ಮಹಿಳಾ ಮೀಸಲಾತಿಯಾಗಿದ್ದು ಯುಡಿಎಫ್‌ನಿಂದ ಇರ್ಫಾನ ಇಕ್ಬಾಲ್ ಸ್ಪರ್ಧಿಸುತ್ತಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂಬ ನೆಲೆಯಲ್ಲಿ ರಾಜಕೀಯದ ಅನುಭವ ಹೊಂದಿದ್ದ ಇವರು ಮಂಜೇಶ್ವರ ಮಂಡಲದಲ್ಲಿ ಪರಿಚಿತ ಮುಖವಾಗಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಜಯಂತಿ ಟಿ. ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಮಂಗಲ್ಪಾಡಿ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ಇವರಿಗೆ ರಾಜಕೀಯದ ಎಲ್ಲಾ ವಿಷಯಗಳು ಕರಗತವಾಗಿವೆ. ಕಳೆದ ಬಾರಿ ಬ್ಲೋಕ್ ಪಂಚಾಯತ್‌ಗೂ ಸ್ಪರ್ಧಿಸಿದ್ದರು. ಪ್ರಸ್ತುತ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದಾರೆ. ಇವರು ಇದೇ ಡಿವಿಶನ್‌ನ ಮತದಾರರು ಎಂಬುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಸಿಪಿಎಂ ಎನ್‌ಸಿಪಿ(ಎಸ್)ಗೆ ಬಿಟ್ಟುಕೊಟ್ಟ ಈ ಮಂಡಲದಿಂದ ನ್ಯಾಶನಲಿಸ್ಟ್ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಖದೀಜಾ ಮೊಗ್ರಾಲ್‌ರನ್ನು ಪಕ್ಷ ಕಣಕ್ಕಿಳಿಸಿದೆ. ಇವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾದರೂ ಅನುಭವದ ಕೊರತೆ ಕಂಡು ಬರದಂತೆ ಚಟುವಟಿಕಾನಿರತರಾಗಿದ್ದಾರೆ.
ಯುಡಿಎಫ್‌ನ ಮಂಡಲವಾದ ಈ ಡಿವಿಶನ್‌ಗೆ ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ನಯಾಬಜಾರ್, ಉಪ್ಪಳ, ಕಡಂಬಾರ್, ಬಡಾಜೆ, ಮಂಜೇಶ್ವರ ಡಿವಿಶನ್‌ಗಳು ಸೇರಿವೆ. ಮಂಜೇಶ್ವರ ಪಂಚಾಯತ್‌ನ 9ರಿಂದ 24ರವರೆಗಿರುವ ವಾರ್ಡ್‌ಗಳು, ಮಂಗಲ್ಪಾಡಿಯ 1ರಿಂದ 9ರವರೆಗೂ, 19ರಿಂದ 24ರವರೆಗೂ, ಮೀಂಜ ಪಂಚಾಯತ್‌ನ 2ರಿಂದ 13ರವರೆಗೂ, 16ನೇ ವಾರ್ಡ್ ಸೇರಿದ ಮಂಜೇಶ್ವರ ಡಿವಿಶನ್‌ನಲ್ಲಿ ಒಟ್ಟು 40 ವಾರ್ಡ್‌ಗಳಿವೆ. ಸ್ಥಳೀಯ ಮತದಾರರೇ ಆಗಿರುವುದು ಐಕ್ಯರಂಗ ಹಾಗೂ ಬಿಜೆಪಿಯ ಅಭ್ಯರ್ಥಿಗಳಿಗೆ ಅನುಕೂಲ ಘಟಕವಾಗಿದ್ದರೆ, ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅನುಭವದಲ್ಲಿ ಎನ್‌ಸಿಪಿಯ ಅಭ್ಯರ್ಥಿ ಮತ ಯಾಚಿಸುತ್ತಿದ್ದಾರೆ. ಇದೇ ವೇಳೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಹಸೀನ ಸಲಾಂ ಕೂಡಾ ಈ ಡಿವಿಶನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.







