ಕುಂಬಳೆ: ಕುಂಬಳೆ ಪೇಟೆ ಮಧ್ಯದಲ್ಲೇ ಅಪಾಯಕ್ಕೆ ಕಾರಣವಾಗುವ ಮರಗಳು ಹಾಗೂ ವಿದ್ಯುತ್ ತಂತಿಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ ಕಣ್ಣುಹಾಯಿಸುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.
ಕುಂಬಳೆ ಪೇಟೆಯ ಆಟೋ ಸ್ಟಾಂಡ್‌ನ ಹಿಂಭಾಗದಲ್ಲಿ ಕಾಲುದಾರಿಯಿದ್ದು, ಅದರ ಪಕ್ಕದಲ್ಲೇ ಎರಡು ಮರಗಳಿವೆ. ಆ ಮರಗಳಿಗೆ ಸ್ಪರ್ಶಿಸಿಕೊಂಡು ಎಚ್‌ಟಿ ವಿದ್ಯುತ್ ಲೈನ್ ಹಾದುಹೋಗಿದೆ. ಶಾಲಾ ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಈ ದಾರಿಯಲ್ಲಿ ಪ್ರತಿದಿನ ನಡೆದಾಡುತ್ತಿದ್ದು ಇವರು ಆತಂಕಪಡಬೇಕಾಗಿ ಬರುತ್ತಿದೆ. ಗಾಳಿ ಬೀಸುವ ವೇಳೆ ಮರದ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿರುವು ದಾಗಿಯೂ ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆಯೆಂದು ತಿಳಿಸಿ ಇದಕ್ಕೊಂದು ಪರಿಹಾರ ಕಾಣಬೇಕೆಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಿಳಿಸಿದ್ದರೂ ಅಧಿಕಾರಿಗಳ್ಯಾರೂ ಗಮನಹರಿಸುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಅಪಾಯ ಸಂಭವಿಸುವ ಮೊದಲೇ ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.