ಜಿಲ್ಲಾಧಿಕಾರಿ, ಎಎಸ್‌ಪಿಯ ತುರ್ತು ಕ್ರಮ : ಕುಂಬಳೆಯಲ್ಲಿ 24 ಗಂಟೆ ಬಳಿಕ ವಿದ್ಯುತ್ ಮರುಸ್ಥಾಪನೆ

ಕುಂಬಳೆ: ವಿದ್ಯುತ್ ಮೊಟಕು ಗೊಂಡು 24 ಗಂಟೆ ಕಳೆದರೂ ಸಂಪರ್ಕ ಮರು ಸ್ಥಾಪಿಸದ  ಅಧಿಕಾರಿ ಗಳ ಕ್ರಮವನ್ನು ಪ್ರತಿಭಟಿಸಿ ನಾಗರಿ ಕರು ನಿನ್ನೆ ರಾತ್ರಿ ಕೆಎಸ್‌ಇಬಿ ಕುಂ ಬಳೆ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿದರು. ಇದೇ ವೇಳೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಹಾಗೂ ಎಎಸ್‌ಪಿ ಎಂ. ನಂದಗೋಪನ್ ಮಧ್ಯಪ್ರವೇಶಿ ಸಿದ ಹಿನ್ನೆಲೆಯಲ್ಲಿ ವಿದ್ಯುತ್ ವಿತರಣೆ ಮರು ಸ್ಥಾಪಿಸಲಾಯಿತು. ಮೊನ್ನೆ ರಾತ್ರಿ 7.30ರ ವೇಳೆ ವಿದ್ಯುತ್ ವಿತರಣೆ ಮೊಟಕುಗೊಂಡಿತ್ತು. ನಿನ್ನೆ ರಾತ್ರಿಯಾದರೂ ವಿದ್ಯುತ್ ವಿತರಣೆ ಮರು ಸ್ಥಾಪಿಸಲು ಸಾಧ್ಯವಾಗಿಲ್ಲ. ಇದರಿಂದ ಗ್ರಾಹಕರು ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿದಾಗ ಹಾನಿ ಪರಿಹರಿಸಲಿರುವ ಕ್ರಮ ಮುಂ ದುವರಿಯುತ್ತಿದೆ ಎಂದು ಅಧಿಕಾರಿಗಳ ಭಾಗದಿಂದ ಮಾಹಿತಿ ಲಭಿಸಿತು.

ಒಂದು ರಾತ್ರಿ, ಹಗಲು ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಕೂಡಾ ಲಭಿಸದ ಸ್ಥಿತಿ ಉಂಟಾದುದರಿಂದ ನಾಗರಿಕರು ನಿನ್ನೆ ರಾತ್ರಿ ೭.೩೦ರ ವೇಳೆ ವಿದ್ಯುತ್ ಕಚೇರಿಗೆ ತಲುಪಿದ್ದರು. ಈ ವೇಳೆಯೂ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಲಿರುವ ಕ್ರಮ ಮುಂದುವರಿಯುತ್ತಿದೆ ಎಂದೇ ಅಧಿಕಾರಿಗಳು ತಿಳಿಸಿದ್ದರು. ಇದೇ ವೇಳೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಕಚೇರಿಗೆ ತಲುಪಿದರು. ಸ್ಥಿತಿ ಸಂಘರ್ಷಾವಸ್ಥೆಗೆ ಸಾಗಲಿದೆ ಎಂದು ತಿಳಿದ ಹಿನ್ನೆಲೆಯಲ್ಲಿ  ಕಾಸರಗೋಡು ಎಎಸ್‌ಪಿ ಎನ್. ನಂದಗೋಪನ್‌ರ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು  ಸ್ಥಳಕ್ಕೆ ತಲುಪಿದರು. ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದ ಬಳಿಕ ಎಎಸ್‌ಪಿ  ವಿದ್ಯುತ್ ಕಚೇರಿ ನೌಕರರೊಂದಿಗೆ ಹಾಗೂ ರಾಜಕೀಯ ಪಕ್ಷಗಳ ನೇತಾರರೊಂದಿಗೆ ಮಾತುಕತೆ ನಡೆಸಿದರು. ಪ್ರಾಥಮಿಕ ಅಗತ್ಯಗಳನ್ನು ಕೂಡಾ ನೆರವೇರಿಸಲು ನೀರಿಲ್ಲದೆ ಸಮಸ್ಯೆ ಎದುರಾದ ಬಗ್ಗೆ ಕೇಳಿ ತಿಳಿದ ಎಎಸ್‌ಪಿ ಕೂಡಲೇ ಜಿಲ್ಲಾಧಿಕಾರಿ ಕೆ. ಇಂಬಶೇಖರನ್‌ರನ್ನು ಸಂಪರ್ಕಿಸಿ ಸಮಸ್ಯೆಯ ಕುರಿತು ವಿವರಿಸಿದರು. ಜಿಲ್ಲಾಧಿಕಾರಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಫೋನ್‌ನಲ್ಲಿ ಸಂಪರ್ಕಿಸಿ ೨ ಗಂಟೆಯೊಳಗೆ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಬೇಕೆಂದು ನಿರ್ದೇಶಿಸಿದರು. ಇದಕ್ಕಾಗಿ ಜಿಲ್ಲೆಯ ಯಾವುದೇ ಸೆಕ್ಷನ್‌ನಿಂದಲೂ ಅಧಿಕಾರಿಗಳನ್ನು ನೇಮಿಸಬೇಕೆಂದೂ ತಿಳಿಸಿದರು. ಇದರಂತೆ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಕುಂಬಳೆಗೆ ತಲುಪಿದರು. ಎರಡು ಗಂಟೆಯೊಳಗೆ ಹಾನಿ ಪತ್ತೆಹಚ್ಚಿ ರಾತ್ರಿ ೧೨.೧೫ರ ವೇಳೆ ವಿದ್ಯುತ್ ವಿತರಣೆ ಮರು ಸ್ಥಾಪಿಸಲಾಯಿತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಹಾಗೂ ಎಎಸ್‌ಪಿಗೆ ಅಭಿನಂದನೆ ಸಲ್ಲಿಸಿ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

RELATED NEWS

You cannot copy contents of this page