ಹೊಸದುರ್ಗ: ಉದ್ಯೋಗಖಾತರಿ ಮೇಲ್ವಿಚಾರಕರ ಸಮಯಪ್ರಜ್ಞೆಯ ಹಸ್ತಕ್ಷೇಪದಿಂದಾಗಿ ಕ್ಷೇತ್ರದ ಕೊಳದಲ್ಲಿ ಮುಳುಗುತ್ತಿದ್ದ ತಂದೆ ಹಾಗೂ ಪುತ್ರಿ ಅಪಾಯದಿಂದ ಪಾರಾಗಿದ್ದಾರೆ. ಮಡಿಕೈ ಕಕ್ಕಾಟ್ ಮಹಾವಿಷ್ಣು ಕ್ಷೇತ್ರ ಕೊಳದಲ್ಲಿ ಈಜುತ್ತಿದ್ದ ವೇಳೆ ಮುಳುಗಿ ಏಳುತ್ತಿದ್ದಿದ್ದ ಕಕ್ಕಾಟ್ ಕುಂಞಿವೀಟಿಲ್ ಮಹೇಶ್ ಹಾಗೂ ಪುತ್ರಿ ದಿಯಾಳಿಗೆ ಪುನರ್ಜನ್ಮ ಲಭಿಸಿದೆ. ಮಡಿಕೈ ಪಂಚಾಯತ್‌ನ 12ನೇ ವಾರ್ಡ್ ಉದ್ಯೋಗ ಖಾತರಿ ಯೋಜನೆಯ ಮೇಲ್ವಿಚಾರಕರಾದ ಪ್ರಸೀತಾ ಮುರಳಿ ಹಾಗೂ ಇಂದಿರಾ ಬಾಬು, ಸ್ಥಳೀಯರಾದ ಮಾರನ್‌ವೀಟಿಲ್ ಚಂದ್ರಶೇಖರನ್ ಇವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಕೆಲಸದ ಸ್ಥಳ ಸಂದರ್ಶಿಸಿ ಮುಂದಿನ ಕೇಂದ್ರಕ್ಕೆ ತೆರಳುವಾಗ ಮೇಲ್ವಿಚಾರಕರಾದ ಪ್ರಸೀತಾ ಹಾಗೂ ಇಂದಿರಾ ಕ್ಷೇತ್ರಕ್ಕೆ ಆಗಮಿಸಿದ್ದರು. ಇವರು ಕ್ಷೇತ್ರಕ್ಕೆ ತೆರಳುವಾಗ ಮಗುವೊಂದು ಕೊಳದಲ್ಲಿ ಈಜುವುದನ್ನು ನೋಡಿದ್ದರು. ಕೆಲವೇ ನಿಮಿಷಗಳು ಕಳೆದು ಹಿಂತಿರುಗಿ ನೋಡುವಾಗ ಮಗು ನೀರಿನಲ್ಲಿ ಮುಳುಗೇಳುವುದನ್ನು ಪ್ರಸೀತಾ ನೋಡಿದ್ದಾರೆ. ತಕ್ಷಣ ಅವರು ಕೊಳಕ್ಕೆ ಹಾರಿದ್ದು, ಜೊತೆಗೆ ಇಂದಿರಾ ಹಾಗೂ ಚಂದ್ರಶೇಖರ ಕೂಡಾ ಕೊಳಕ್ಕೆ ಇಳಿದಿದ್ದಾರೆ.
ಈ ವೇಳೆ ಪ್ರಸೀತಾ ಮಗುವನ್ನು ದಡಕ್ಕೆ ತಲುಪಿಸಿದ್ದು, ಜೊತೆಯಲ್ಲೇ ತಂದೆಯನ್ನು ಕೂಡಾ ಪಾರುಮಾಡಲಾಗಿದೆ. ಈಜುತ್ತಿದ್ದ ಮಧ್ಯೆ ಮಗು ಕೊಳದಲ್ಲಿ ಮುಳುಗುವುದನ್ನು ನೋಡಿದ ಈಜು ಬಾರದ ತಂದೆ ಕೊಳಕ್ಕೆ ಹಾರಿದ್ದಾರೆನ್ನಲಾಗಿದೆ. ಬೆಂಗಳೂರಿನಿಂದ ಮಹೇಶ್‌ರ ಕುಟುಂಬ ರಜೆಯಲ್ಲಿ ಊರಿಗೆ ತಲುಪಿತ್ತು. ೭ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿಯ ಜೊತೆ ಕೊಳಕ್ಕೆ ಇಳಿದಾಗ ಅಪಾಯ ಸಂಭವಿಸಿದೆ.







