ಕಾಸರಗೋಡು: ಕೇರಳ ವಿಧಾನ ಸಭೆ ಅಂಗೀಕರಿಸಿದ ಮಲೆಯಾಳ ಭಾಷಾ ಕಲಿಕೆ ಕಡ್ಡಾಯ ಮಸೂದೆ ಯಿಂದ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾತರಾದ ಕನ್ನಡಿಗರನ್ನು ಹೊರತುಪಡಿಸಬೇಕೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಒತ್ತಾಯಿಸಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಕನ್ನಡದಲ್ಲೂ ಕಲಿಯುವ ಅವಕಾಶ ನೀಡಬೇಕು ಎಂದೂ ಅವರು ಒತ್ತಾಯಿಸಿದರು. ಅದೇ ರೀತಿ ಚುನಾವಣಾ ಆಯೋಗದ ಎಸ್‌ಐಆರ್ ಸೇರಿದಂತೆ ಎಲ್ಲಾ ದಾಖಲೆಪತ್ರಗಳನ್ನು ಕನ್ನಡದಲ್ಲಿ ತಯಾರಿಸಬೇಕು. ಮತದಾರರ ಪಟ್ಟಿ ಕನ್ನಡದಲ್ಲಿ ಇಲ್ಲದ ಕಾರಣ ಹಲವು ಕನ್ನಡಿಗರು ಮತದಾರರ ಪಟ್ಟಿಯಿಂದ ಹೊರತಾಗಿದ್ದಾರೆ.
ಎಸ್‌ಐಆರ್ ಫಾರ್ಮ್ ಮಲೆಯಾಳದಲ್ಲಿ ಮಾತ್ರ ಇದ್ದುದರಿಂದ ಅದನ್ನು ಭರ್ತಿಗೊಳಿಸಲು ಕನ್ನಡಿಗರಿಗೆ ಸಾಧ್ಯವಾಗದೆ ಸಮಸ್ಯೆಗೀಡಾಗಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಾಣಬೇಕು. ಜಿಲ್ಲಾಧಿಕಾರಿ ಈ ವಿಷಯದಲ್ಲಿ ತುರ್ತು ಕ್ರಮ ಕೈಗೊಂಡು ಚುನಾವಣಾ ಆಯೋಗವನ್ನು ಸಮೀಪಿಸಿ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸುವ ಎಲ್ಲಾ ಸ್ಥಳ ನಾಮಫಲಕಗಳಲ್ಲಿ ಕನ್ನಡವನ್ನು ಸೇರಿಸಬೇಕು ಎಂದು ಆಗ್ರಹಪಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸುನಿಲ್ ಪಿ.ಆರ್, ಬಾಬುರಾಜ್ ಮೊದಲಾದವರು ಉಪಸ್ಥಿತರಿದ್ದರು.





