ಕುಂಬಳೆ: ಅನಂತಪುರ ಉದ್ದಿಮೆ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ ರೆಡ್‌ಫೋರ್ಟ್ ಫಯರ್ ವರ್ಕ್ಸ್ ಎಂಬ ಸುಡುಮದ್ದು ನಿರ್ಮಾಣ ಕಾರ್ಖಾನೆಯಲ್ಲಿ ನಿನ್ನೆ ಸ್ಫೋಟ ಉಂಟಾಗಿ ಅದರ ಮಿಕ್ಸಿಂಗ್ ಘಟಕ ಪೂರ್ಣವಾಗಿ ಕುಸಿದು ಬಿದ್ದಿದೆ. ಅಲ್ಲೇ ಪಕ್ಕ ರಾಶಿ ಹಾಕಲಾಗಿದ್ದ ಕಸದ ರಾಶಿಗೆ ಹಾಕಿದ್ದ ಬೆಂಕಿಯಿಂದ ಕಾರ್ಖಾನೆಗೆ ಬೆಂಕಿ ತಗಲಿಕೊಂಡಿರುವುದಾಗಿ ಸಂಶಯಿಸಲಾಗುತ್ತಿದೆ. ಅನಾಹುತ ಸಂಭವಿಸಿದ ವೇಳೆ ಅಲ್ಲಿಂದ ಪ್ರಾಣ ರಕ್ಷಣೆಗಾಗಿ ಓಟಕಿತ್ತ ಇಬ್ಬರು ಕಾರ್ಮಿಕರಾದ ತಮಿಳುನಾಡು ಶಿವಕಾಶಿ ನಿವಾಸಿಗಳಾದ ಶಂಕರ ಮತ್ತು ಕುರುಪ್ಪ ಸ್ವಾಮಿ ಎಂಬವರು ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ. ಮಿಕ್ಸಿಂಗ್ ಘಟಕ ಮತ್ತು ಕಚ್ಚಾ ಸಾಮಗ್ರಿಗಳನ್ನು ದಾಸ್ತಾನು ಇರಿಸುವ ೨೫ರಷ್ಟು ಶೆಡ್‌ಗಳು ಈ ಪರಿಸರದಲ್ಲಿದೆ. ಆ ಬಗ್ಗೆ ಮಾಹಿತಿ ಲಭಿಸಿದ ಜಿಲ್ಲಾ ಫಯರ್ ಆಫೀಸರ್ ಮೂಸಾ ವಡಕ್ಕಿತ್ತಿಲ್‌ರ ನೇತೃತ್ವದಲ್ಲಿ ಕಾಸರಗೋಡು ಮತ್ತು ಉಪ್ಪಳ ಅಗ್ನಿಶಾಮಕದಳ ತಕ್ಷಣ ಮೂರು ಇಂಜಿನ್ ವಾಹನಗಳಲ್ಲಾಗಿ ಘಟನೆ ಸ್ಥಳಕ್ಕೆ ಆಗಮಿಸಿ ಗಂಟೆಗಳ ತನಕ ನೀರು ಹಾಯಿಸುವ ಮೂಲಕ ಭಾರೀ ದೊಡ್ಡ ಅಗ್ನಿ ಅನಾಹುತವನ್ನು ತಪ್ಪಿಸಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯು ಆಫೀಸರ್ ಎಂ. ರಫೀಕ್, ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಟಿ. ಅಮಲ್‌ರಾಜ್, ಎಸ್. ಅಭಿಲಾಷ್, ವಿ.ಕೆ. ಶೈಜು, ರಾಜೇಶ್ ಪಾವೂರು, ಟಿ.ಎಸ್. ಶರಣ್, ಎಸ್. ಮುಹಮ್ಮದ್ ಶಾಫಿ, ಟಿ.ಎಸ್. ಮುರಳೀಧರನ್, ಕೆ.ವಿ. ಅಭಿಜಿತ್, ವಿ. ಮಹೇಶ್, ವಿ.ಆರ್. ಅತುಲ್ ಮತ್ತು ವಿ.ಎಸ್. ಶ್ರೀಜಿತ್ ಎಂಬವರು ತಕ್ಷಣ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
ಈ ಕಾರ್ಖಾನೆಯಲ್ಲಿ ಅದೆಷ್ಟು ಪ್ರಮಾಣದಲ್ಲಿ ಸುಡುಮದ್ದುಗಳಿದ್ದವು ಎಂಬ ಮಾಹಿತಿ ಲಭಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿ ಕಾರ್ಖಾನೆಯ ಮಾಲಕಿ ಕೂಡ್ಲು ಕೇಳುಗುಡ್ಡೆಯ ನಸೀಮರ ವಿರುದ್ಧ ಕುಂಬಳೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಡುಮದ್ದು ತಯಾರಿಸುವ ಸಾಮಗ್ರಿಗಳನ್ನು ಸ್ಫೋಟಗೊಂಡ ಕಾಂಕ್ರೀಟ್ ಶೆಡ್‌ನಲ್ಲಿ ದಾಸ್ತಾನಿರಿಸಲಾಗಿತ್ತೆಂದೂ, ಅದರಿಂದಾಗಿ ಆ ಕಟ್ಟಡ ಕುಸಿದು ಬಿದ್ದಿದೆ. ದುರ್ಘಟನೆಯ ವಿಷಯವನ್ನು ಸಕಾಲದಲ್ಲಿ ಪೊಲೀಸರಿಗೆ ತಿಳಿಸದ ಹೆಸರಲ್ಲಿ ಕಾರ್ಖಾನೆ ಮಾಲಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಕಾರ್ಖಾನೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಪಟಾಕಿಗಳನ್ನು ದಾಸ್ತಾನಿರಿಸಿದ ಆರೋಪದಂತೆ ಕಾರ್ಖಾನೆಯ ಮಾಲಕಿ ವಿರುದ್ಧ ಕುಂಬಳೆ ಪೊಲೀಸರು ಈ ಹಿಂದೆಯೂ ಬೇರೊಂದು ಕೇಸು ದಾಖಲಿಸಿಕೊಂಡಿದ್ದರು. ಆದ್ದರಿಂದ ಕಾರ್ಖಾನೆಯ ಲೈಸನ್ಸ್‌ನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದೆಂದೂ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಕೆ. ಮುಕುಂದನ್ ತಿಳಿಸಿದ್ದಾರೆ.






