ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ 5೦ ಸಾವಿರ ರೂ. ದಂಡ

ಕುಂಬಳೆ: ಹೋಟೆಲ್‌ನ ತ್ಯಾಜ್ಯ ನೀರನ್ನು ಸಮೀಪದ ಚರಂಡಿಗೆ ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಿದ  ಪಂಚಾಯತ್ ಅಧಿಕಾರಿಗಳು  ಕುಂಬಳೆಯ ಶ್ರೀಕೃಷ್ಣ ಹೋಟೆಲ್‌ಗೆ  50 ಸಾವಿರ ರೂಪಾಯಿ ದಂಡ ವಿಧಿಸಿ ನೋಟೀಸು ನೀಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮೋಟಾರು ಉಪಯೋಗಿಸಿ ಚರಂಡಿಗೆ ತ್ಯಾಜ್ಯ ನೀರನ್ನು ಹರಿಯಬಿಡುತ್ತಿರುವುದಾಗಿ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹೋಟೆಲ್‌ನಿಂದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ‘ಕಾರವಲ್ ಮೀಡಿಯ’ ನಿನ್ನೆ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಡುವುದರಿಂದ ಪರಿಸರ ಪ್ರದೇಶಗಳಲ್ಲಿ  ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಲು ಸಾಧ್ಯತೆ ಇದೆಯೆಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳ ಪಂಚಾಯತ್‌ರಾಜ್ ನಿಯಮ ಹಾಗೂ ಶುಚಿತ್ವ-ತ್ಯಾಜ್ಯ ಸಂಸ್ಕರಣೆ ಕಾಯ್ದೆಗಳನ್ನು ಉಲ್ಲಂಘಿಸಿದುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಪಂಚಾಯತ್ ಹೆಲ್ತ್ ಇನ್‌ಸ್ಪೆಕ್ಟರ್ ಸೌಮ್ಯ ಪಿ.ವಿ ನೇತೃತ್ವದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ರೀತಿಯ ಅನಧಿಕೃತ ಚಟುವಟಿಕೆ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಾರ್ವಜನಿಕರ ಆರೋಗ್ಯ, ಪರಿಸರ ಸಂರಕ್ಷಣೆಯನ್ನು ಮನಗಂಡು ಪಂಚಾಯತ್‌ನ ಭಾಗದಿಂದ ತಪಾಸಣೆ ಮುಂದುವರಿಯಲಿದೆ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ತ್ಯಾಜ್ಯವನ್ನು ಇನ್ನೂ ಕೆಲವರು ಚರಂಡಿಗೆ ಹರಿಯ ಬಿಟ್ಟಿರುವುದಾಗಿ ಹೇಳಲಾಗುತ್ತಿದೆ ಯೆಂದೂ ಆ ಬಗ್ಗೆ ತನಿಖೆ ನಡೆಸುವು ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page