ಉಪ್ಪಳ: ಪೇಟೆಯ ರೈಲ್ವೇ ನಿಲ್ದಾಣ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿ ಕಾರ್ಯಾಚರಿ ಸುತ್ತಿದ್ದ ಮಾಸ್ಟರ್ ಕಂಪ್ಯೂಟರ್ ಸೆಂಟರ್ ಬೆಂಕಿಗಾಹುತಿಯಾಗಿದೆ. ಕಾಸರಗೋಡು ನಿವಾಸಿ ಶಫೀಕ್ ಎಂಬವರ ಮಾಲಕತ್ವದ ಅಂಗಡಿ ನಿನ್ನೆ ಮಧ್ಯಾಹ್ನ ಬೆಂಕಿಯಿಂದ ಉರಿದು ನಾಶಗೊಂಡಿದೆ. ಅಂಗಡಿ ಮುಚ್ಚಿ ಮಾಲಕ ಹಾಗೂ ನೌಕರರು ನಮಾಜು ಮಾಡಲು ಸಮೀಪದ ಮಸೀದಿಗೆ ತೆರಳಿದ್ದರು. ಅವರು ಹಿಂತಿರುಗುವ ವೇಳೆ ಅಂಗಡಿಯೊಳಗಿಂದ ಬೆಂಕಿ ಹಾಗೂ ಹೊಗೆ ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದರೂ ಈ ವೇಳೆ ಅಂಗಡಿಯೊಳಗಿದ್ದ ಸಾಮಗ್ರಿಗಳು ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ಅಗ್ನಿ ದುರಂತಕ್ಕೆ ಕಾರಣವೆನ್ನಲಾಗಿದೆ.
ಸಿಸಿ ಕ್ಯಾಮರಾ, ಲ್ಯಾಪ್‌ಟಾಪ್ ಸಹಿತ ಮಾರಾಟಕ್ಕಿರಿಸಿದ್ದ ವಿವಿಧ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಲ್ಲದೆ ಅಂಗಡಿಯ ಸಮೀಪ ಕೆಳಭಾಗದಲ್ಲಿ ನಿಲ್ಲಿಸಿದ್ದ ವ್ಯಾಪಾರಿಯೋರ್ವರ ಸ್ಕೂಟರ್ ಉರಿದು ನಾಶವಾಗಿದೆ. ಮೇಲಿಂದ ಬೆಂಕಿ ಸ್ಕೂಟರ್‌ಗೆ ಬಿದ್ದು ಸ್ಕೂಟರ್ ಹೊತ್ತಿ ಉರಿದಿರಬೇಕೆಂದು ಶಂಕಿಸಲಾಗಿದೆ. ಪರಿಸರದ ವ್ಯಾಪಾರಿಗಳಿಗೂ ಆತಂಕ ಸೃಷ್ಟಿಸಿದ ಈ ಘಟನೆಯಿಂದ ರೈಲು ನಿಲ್ದಾಣ ರಸ್ತೆಯಲ್ಲಿ ಅಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.