ಕುಂಬಳೆ: ಕುಂಬಳೆಯಲ್ಲಿ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮೊದಲ ಪರಿಗಣನೆ ನೀಡುವುದಾಗಿ ಕುಂಬಳೆ ಪಂಚಾಯತ್‌ನ ನೂತನ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ತಿಳಿಸಿ ದ್ದಾರೆ. ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇವರು ಕಾರವಲ್‌ನೊಂದಿಗೆ ಈ ಬಗ್ಗೆ ತಿಳಿಸಿದ್ದಾರೆ. ಕುಂಬಳೆ ಪೇಟೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಕಾಸರಗೋಡು ಹಾಗೂ ಮಂಗಳೂರು ಮಧ್ಯೆ ಪ್ರಧಾನ ಪೇಟೆಯಾಗಿರುವ ಕುಂಬಳೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್‌ಗೆ ಪೇಟೆಯಲ್ಲಿ ಸ್ಥಳ ಲಭ್ಯವಾಗದಿದ್ದಲ್ಲಿ ಬಿಒಟಿ ವ್ಯವಸ್ಥೆಯಲ್ಲಿ ಸ್ಥಳ ಪತ್ತೆಹಚ್ಚಲಾಗುವುದು. ಪಂಚಾಯತ್ ಸದಸ್ಯರೊಂದಿಗೆ ಹಾಗೂ ಬಹುಜನ ಸಂಘಟನೆಯೊಂದಿಗೆ ಈ ಕುರಿತಾಗಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.







