ಮುಸ್ಲಿಂಲೀಗ್‌ಗೆ ನಾಲ್ಕು ಸಚಿವ ಸ್ಥಾನ: ಪಟ್ಟಿ ಸಿದ್ಧ

ತಿರುವನಂತಪುರ: ಹತ್ತು ವರ್ಷದ ಬಳಿಕ ಕೇರಳದಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಯುಡಿಎಫ್ ಸರಕಾರದಲ್ಲಿ ಸಚಿವರಾಗುವ ಮುಸ್ಲಿಂ ಲೀಗ್‌ನ ನೇತಾರರಾದ ಯಾದಿಯನ್ನು ಮುಸ್ಲಿಂ ಲೀಗ್ ರಾಜ್ಯ ನೇತೃತ್ವ ಈಗಾಗಲೇ ತಯಾರಿಸಿದೆ.

ಇದರಂತೆ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ, ಪಿ.ಕೆ ಬಶೀರ್, ಎಂ.ಕೆ. ಶಾಜಿ ಮತ್ತು ಎನ್. ಶಂಸುದ್ದೀನ್ ಎಂಬವರ ಪಟ್ಟಿಯನ್ನು  ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಲೀಗ್ ಸಿದ್ಧಪಡಿಸಿದೆ. ಯುಡಿಎಫ್ ಸಚಿವ ಸಂಪುಟದಲ್ಲಿ ಮುಸ್ಲಿಂ ಲೀಗ್‌ಗೆ ನಾಲ್ಕು ಸಚಿವ ಸ್ಥಾನ ನೀಡುವ ತೀರ್ಮಾನವನ್ನು ಯುಡಿಎಫ್ ಈಗಾಗಲೇ ಕೈಗೊಂಡಿದೆ. ಆದರೆ ನಮಗೆ ಐದು ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಇದೇ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮುಂದಿರಿಸಿದೆ. ಇದರಂತೆ ಒಂದು ವೇಳೆ ಲೀಗ್‌ನ ಐದನೇ ಸಚಿವ ಸ್ಥಾನ ಲಭಿಸಿದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ನೀಡಲು ಮುಸ್ಲಿಂ ಲೀಗ್ ಮುಂದಾಗಿದೆ.

 ಹೆಚ್ಚುವರಿಯಾಗಿ ಇನ್ನೊಂದು ಸಚಿವ ಸ್ಥಾನ ಲಭಿಸದಿದ್ದಲ್ಲಿ ಅದರ ಬದಲು ವಿಧಾನಸಭಾ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಅಥವಾ ಮುಖ್ಯ ಸಚೇತಕ ಸ್ಥಾನಗಳ ಪೈಕಿ ಯಾವುದಾದರೊಂದನ್ನು ನಮಗೆ ನೀಡಬೇಕೆಂಬ ಬೇಡಿಕೆಯನ್ನು  ಇನ್ನೊಂದೆಡೆ ಮುಸ್ಲಿಂ ಲೀಗ್ ಮುಂದಿರಿಸಿದೆ. ಮಾತ್ರವಲ್ಲ ಪಕ್ಷದ  ಹಿರಿಯ ನೇತಾರರಾದ ಡಾ ಎಂ.ಕೆ. ಮುನೀರ್ ಮತ್ತು ಕೆ.ಪಿ.ಎ ಮಜೀದ್‌ರಿಗೆ ಯಾವುದಾದರೊಂದು ಔದ್ಯೋಗಿಕ ಸ್ಥಾನಮಾನ ನೀಡಬೇಕು. ಹಾಗೆ ನಡೆದಲ್ಲಿ ಎಂ.ಕೆ. ಮುನೀರ್‌ರಿಗೆ ಆಡಳಿತ ಪರಿಷ್ಕರಣೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲು ಮುಸ್ಲಿಂ ಲೀಗ್ ತೀರ್ಮಾನಿಸಿದೆ. ಇನ್ನು ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಪಕ್ಷಕ್ಕೆ ಲಭಿಸುವ  ಸ್ಥಾನಗಳನ್ನು ಮುಸ್ಲಿಂ ಲೀಗ್‌ನ ಅರ್ಹ ವ್ಯಕ್ತಿಗಳಿಗೆ ನೀಡುವ ತೀರ್ಮಾನಕ್ಕೂ ಪಕ್ಷ ಬಂದಿದೆ.

You cannot copy contents of this page