ಕಾಸರಗೋಡು: ಕಾಸರಗೋಡು ನಗರದಿಂದ ಹಾಡಹಗಲೇ ಮೇಲ್ಪ ರಂಬ ನಿವಾಸಿಯಾದ ಯುವಕನನ್ನು ಕಾರಿನಲ್ಲಿ ಅಪಹರಿಸಿದ ತಂಡವನ್ನು ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ. ಸಕಲೇಶಪುರದಿಂದ ನಿನ್ನೆ ಸಂಜೆ ತಂಡ ಸೆರೆಗೀಡಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಆಧಾರದಲ್ಲಿ ಕರ್ನಾಟಕ ಹಾಗೂ ಆಂಧ್ರ ಪೊಲೀಸರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ತಂಡ ಸೆರೆಗೀಡಾಗಿದೆ.
ಮೇಲ್ಪರಂಬ ನಿವಾಸಿಯಾದ ಹನೀಫ ಎಂಬಾತನನ್ನು 5 ಮಂದಿ ಆಂಧ್ರ ನಿವಾಸಿಗಳು ನಿನ್ನೆ ಮಧ್ಯಾಹ್ನ ಕಾಸರಗೋಡು ನಗರದಿಂದ ಅಪಹರಿಸಿದೆ. ಅಶ್ವಿನಿನಗರದ ಹೋಟೆಲೊಂದರ ಮುಂಭಾಗದಲ್ಲಿ ನಿಂತಿದ್ದ ಯುವಕನನ್ನು ತಂಡ ಬಲವಂತವಾಗಿ ಹಿಡಿದು ಕಾರಿಗೆ ಹತ್ತಿಸಿ ಕೊಂಡೊಯ್ದಿತ್ತು. ಇದನ್ನು ಕಂಡ ಸೆಕ್ಯುರಿಟಿ ನೌಕರ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ದೂರು ಲಭಿಸದ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ನಿರ್ಲಕ್ಷ್ಯ ವಹಿಸಿದರೂ ಬಳಿಕ ಇದು ಗಂಭೀರ ಪ್ರಕರಣವಾದುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿಯವರ ನಿರ್ದೇಶದ ಮೇರೆಗೆ ಪೊಲೀಸರು ಜಾಗ್ರತೆ ವಹಿಸಿದ್ದಾರೆ. ಅಪಹರಣಗೈದ ಕಾರಿನ ನಂಬ್ರ ಲಭಿಸುವುದರೊಂದಿಗೆ ವಿಷಯವನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಆಂಧ್ರಪ್ರದೇಶ ನೋಂದಾವಣೆಯ ಎಪಿ ೪೦ ಇಯು ೪೦೭೭ ನಂಬ್ರದ ಕಾರಿನಲ್ಲಿ ಹನೀಫರನ್ನು ಅಪಹರಿಸಿ ರುವುದಾಗಿ ಖಚಿತಗೊಂಡಿದೆ. ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಆಂಧ್ರ ಪೊಲೀಸರ ಸಹಾಯದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ತಂಡವನ್ನು ಸೆರೆಹಿಡಿಯಲಾಗಿದೆ. ತಂಡವನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೊಳಪಡಿಸಿದರೆ ಘಟನೆಯ ಪೂರ್ಣ ಮಾಹಿತಿ ಬೆಳಕಿಗೆ ಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿವಾದವೇ ಹನೀಫರನ್ನು ತಂಡ ಅಪಹರಿಸಲು ಕಾರಣವೆಂದು ಪೊಲೀಸರು ಸಂಶಯಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆಂಧ್ರ ನಿವಾಸಿಗಳು ಕಾಸರಗೋಡಿನಲ್ಲಿ ದ್ದುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಬೇಕಲ ನಿವಾಸಿಯಾದ ಶರೀಫ್ ಎಂಬಾತ ಹಾಗೂ ಹನೀಫನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ತರ್ಕವಿತ್ತೆಂದೂ ಇದುವೇ ಅಪಹರಣಕ್ಕೆ ಕಾರಣವೆಂದು ಪೊಲೀಸರು ಹೇಳುತ್ತಿದ್ದಾರೆ.







