ಪಾಂಡಿ ಅರಣ್ಯ, ಪೆರಿಯಾದಲ್ಲಿ ಪತ್ತೆಯಾದ ಜ್ಯೋಮಿಕುರಿಂಜೆ ಸಸ್ಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕವಾಗುವ ನಿರೀಕ್ಷೆ

ಕಾಸರಗೋಡು: ಜಿಲ್ಲೆಯ ಅಡೂರು ಪಾಂಡಿ, ಪೆರಿಯ ಅರಣ್ಯ ವಲಯಗಳಲ್ಲಿ ಮಾತ್ರವಾಗಿ ಕಂಡುಬರುವ ಅಪೂರ್ವ ಸಸ್ಯಜಾತಿಗೆ ಸೇರಿದ ಜ್ಯೋಮಿಕುರಿಂಜೆ (Strobilanthes Jomyi) ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕವಾಗಬಹುದೆಂದು ಪತ್ತೆಹಚ್ಚಲಾಗಿದೆ. ಬೆಂಗಳೂರು ಕ್ರೈಸ್ಟ್ ವಿ.ವಿಯ ಲೈಫ್ ಸಯನ್ಸ್ ಇಲಾಖೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಅಭಿರಾಮ್ ಸುರೇಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿ ಡಾ| ಫಾದರ್ ಜೋಬಿ ಸೇವಿಯರ್ ಜೊತೆಯಾಗಿ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಜ್ಯೋಮಿಕುರಿಂಜೆಯ ಸಕ್ರಿಯ ಘಟಕಗಳು ದೊಡ್ಡ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಎಂಬೀ ಕ್ಯಾನ್ಸರ್ ಕೋಶಗಳಲ್ಲಿ ತೀವ್ರ ಪ್ರತಿಕ್ರಿಯೆ ಉಂಟುಮಾಡುವುದಾಗಿ ಇವರು ಪತ್ತೆಹಚ್ಚಿದ್ದಾರೆ. ಸಸ್ಯದ ಎಲೆ, ದಂಟು, ಬೇರುಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಆಂಟಿ ಓಕ್ಸಿಡೆಂಟ್ ಸಾಮರ್ಥ್ಯ, ಫಿನೋಲ್, ಫ್ಲೇವನೋಯ್ಡ್, ಕಾರ್ಬೋ ಹೈಡ್ರೇಟ್, ಪ್ರೊಟೀನ್, ಪ್ರೋಲಿನ್, ಕ್ಲೋರೋಫಿಲ್ ಅಡಕ ವಾಗಿರುವ ಫೈಟೋ ಕೆಮಿಕಲ್‌ಗಳು ಸಮೃದ್ಧವಾಗಿ ಪತ್ತೆಯಾಗಿವೆ. ಭಯೋ ಆಕ್ಟಿವ್ ಘಟಕಗಳು ಕೂಡಾ ಇದರಲ್ಲಿ ಕಂಡು ಬಂದಿದೆ. ಔಷಧ ಸಸ್ಯ ಗುಣ ತಪಾಸಣಾ ಅಧ್ಯಯನಗಳ ಪ್ರಕಾರ ಜ್ಯೋಮಿಕುರಿಂಜೆ ಮನುಷ್ಯರ ಉಪಯೋಗಕ್ಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಲಾಗಿದೆ. ಈ ಸಸ್ಯದ ಸಾರಾಂಶ, ಘಟಕಗಳು ಆಯುರ್ವೇದ ಔಷಧಗಳ ಪ್ರಮುಖ ಆಂಟಿ ಓಕ್ಸಿಡೆಂಟ್ ಫಾರ್ಮುಲೇ ಷನ್‌ಗಳಲ್ಲಿ ಒಳಪಡಿಸಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಧುನಿಕ ಶಾಸ್ತ್ರ, ಪರಂಪರಾಗತ ಚಿಕಿತ್ಸಾ ರೀತಿಗಳು ಜೊತೆಯಾಗುವ ಹೊಸ ದಾರಿ ಈ ಮೂಲಕ  ತೆರೆಯಲ್ಪಡಲಿದೆ ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ. ಡಾ| ಅಭಿರಾಮ್ ಸುರೇಶ್ ಕಣ್ಣೂರು ಮವ್ವಾಂಜೇರಿ ಪೂವಂತರದ ನಿವೃತ್ತ ಅಧ್ಯಾಪಕರಾದ ವಿ.ಸಿ. ಸುರೇಶ್- ಕೆ.ಪಿ. ಉಷಾ ಕುಮಾರಿ ದಂಪತಿ ಪುತ್ರನಾಗಿದ್ದಾರೆ.

You cannot copy contents of this page