ಶಬರಿಮಲೆ ದೇಗುಲದಿಂದ ಲೂಟಿ ಹೊಡೆದ ಚಿನ್ನ ಬಳ್ಳಾರಿಯಲ್ಲಿ ಪತ್ತೆ

ತಿರುವನಂತಪುರ: ಶಬರಿಮಲೆ ದೇಗುಲದಿಂದ ನಾಪತ್ತೆಯಾದ ಚಿನ್ನವನ್ನು ಕರ್ನಾಟಕದ ಬಳ್ಳಾರಿ ಯಿಂದ ತನಿಖಾ ತಂಡ (ಎಸ್‌ಐಟಿ) ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಗಟ್ಟಿ ರೂಪದಲ್ಲಿ ಚಿನ್ನವನ್ನು ಪತ್ತೆಹಚ್ಚಲಾಗಿದೆ. ಆದರೆ ಅಲ್ಲಿಂದ ಎಷ್ಟು ಪ್ರಮಾಣದ ಚಿನ್ನ ವಶಪಡಿಸಲಾಗಿದೆ ಎಂಬ ಮಾಹಿತಿಯನ್ನು ತನಿಖಾ ತಂಡ ಈತನಕ ಬಹಿರಂಗಪಡಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅದನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದ ಚಿನ್ನವನ್ನು ಪ್ರಾಯೋಜಕ ಹಾಗೂ ಈ ಪ್ರಕರಣದ ಒಂದನೇ ಆರೋಪಿಯೂ ಆಗಿರುವ ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆಯಿಂದ ಬಳ್ಳಾರಿಗೆ ಸಾಗಿಸಿ ಅಲ್ಲಿ ಮಾರಾಟ ಮಾಡಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಅದರ ಆಧಾರದಲ್ಲಿ ಉಣ್ಣಿಕೃಷ್ಣನ್ ಪೋತ್ತಿಯನ್ನು ತನಿಖಾ ತಂಡ ಬಳ್ಳಾರಿಗೆ ಸಾಗಿಸಿ ಅಲ್ಲಿ ನಡೆಸಿದ ಮಾಹಿತಿ ಸಂಗ್ರಹದಲ್ಲಿ ಅಲ್ಲಿನ ಚಿನ್ನದಂಗಡಿಯೊಂದರಿಂದ ಗಟ್ಟಿ ರೂಪದಲ್ಲಿ ಆ ಚಿನ್ನವನ್ನು ಪತ್ತೆಹಚ್ಚಿದೆ. ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ತನಗೆ 476  ಗ್ರಾಂ ಚಿನ್ನ ಮಾರಾಟ ಮಾಡಿದ್ದನೆಂದು ಆ ಚಿನ್ನದಂಗಡಿಯ ಮಾಲಕ ಗೋವರ್ಧನ್ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದು, ಅದರಿಂದಾಗಿ ಗೋವರ್ಧನ್‌ರನ್ನು ಈ ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯಲ್ಲಿ ಒಳಪಡಿಸುವ ಸಾಧ್ಯತೆ ಇದೆ.

ಶಬರಿಮಲೆ ಕ್ಷೇತ್ರದ ಚಿನ್ನ ಕದ್ದ ಪ್ರಕರಣದ ಹೆಚ್ಚಿನ ತನಿಖೆಗಾಗಿ ಉಣ್ಣಿಕೃಷ್ಣನ್ ಪೋತ್ತಿಯ ಸಹಿತ ತನಿಖಾ ತಂಡ ನಿನ್ನೆ ಬಳ್ಳಾರಿಗೆ ಸಾಗಿತ್ತು. ಅಲ್ಲಿ ನಡೆಸಿದ ತನಿಖೆ ಪೂರ್ಣಗೊಳಿಸಿದ ಬಳಿಕ ತನಿಖಾ ತಂಡ ಈಗ ಬೆಂಗಳೂರಿಗೆ  ಸಾಗಿದ್ದು ಅಲ್ಲಿಂದಲೂ ಅಗತ್ಯದ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಕದ್ದ ಚಿನ್ನವನ್ನು  ತಾನು ಬಳ್ಳಾರಿಯ ಚಿನ್ನದಂಗಡಿಗೆ ಮಾರಾಟ ಮಾಡಿದ್ದೇನೆಂದು ವಿಚಾರಣೆ ವೇಳೆ ಪೋತ್ತಿ ಹೇಳಿಕೆ ನೀಡಿದ್ದನು. ಅದರ ಆಧಾರದಲ್ಲಿ  ತನಿಖಾ ತಂಡ ಈ ಪ್ರಕರಣದ ತನಿಖೆಯನ್ನು ಬಳ್ಳಾರಿ ಮತ್ತು ಬೆಂಗಳೂರಿಗೆ ವಿಸ್ತರಿಸಿದೆ. ಅಲ್ಲಿ ತನಿಖೆ ಇನ್ನೂ ಮುಂದುವರಿಯುತ್ತಿದೆ. ಎಸ್ ಪಿ ಗಿರಿಧರ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ  ನಡೆಯುತ್ತಿದೆ.

ಆರೋಪಿ ಉಣ್ಣಿಕೃಷ್ಣನ್‌ನ  ಬೆಂಗಳೂರಿನಲ್ಲಿರುವ ಎರಡು  ಪ್ಲಾಟ್‌ಗಳಿಂದಲೂ ಮಾಹಿತಿ ಸಂಗ್ರಹ ಆರಂಭ

ಬೆಂಗಳೂರು: ಶಬರಿಮಲೆ ದೇಗುಲದಿಂದ ಚಿನ್ನ ಸಾಗಿಸಿದ ಪ್ರಕರಣದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಬೆಂಗಳೂರಿನಲ್ಲಿ  ಎರಡು ಪ್ಲಾಟ್ ಗಳನ್ನು ಹೊಂದಿದ್ದು, ವಿಶೇಷ ತನಿಖಾ ತಂಡ ಇಂದು ಬೆಳಿಗ್ಗೆ  ಅಲ್ಲಿಗೆ ಸಾಗಿ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದೆ. ಬೆಂಗಳೂರಿನ ಮಲ್ಲೇಶ್ವರ ಮತ್ತು ಶ್ರೀರಾಮಪುರಗಳಲ್ಲಾಗಿ ಉಣ್ಣಿಕೃಷ್ಣನ್ ಪೋತ್ತಿ  ಈ ಪ್ಲಾಟ್‌ಗಳನ್ನು ಹೊಂದಿದ್ದು ಅಲ್ಲಿಂದಲೂ ಅಗತ್ಯದ ಮಾಹಿತಿ ಸಂಗ್ರಹ ಇನ್ನೂ ಮುಂದುವರಿಯುತ್ತಿದೆ. ಇಲ್ಲಿಂದ ಮಾಹಿತಿ ಸಂಗ್ರಹಿಸುವ ವೇಳೆ ತನಿಖಾ ತಂಡ ಪೋತ್ತಿಯನ್ನು ಅಲ್ಲ್ಲಿಗೆ ಕರೆತಂದಿಲ್ಲ.

ಉಣ್ಣಿಕೃಷ್ಣನ್‌ನ ನಿಜವಾದ ಹೆಸರು ಉಣ್ಣಿಕೃಷ್ಣನ್ ಪೋತ್ತಿ ಎಂದಾದರೆ ಬೆಂಗಳೂರಿನಲ್ಲಿ ಆತ ತನ್ನ ಹೆಸರನ್ನು ಉಣ್ಣಿಕೃಷ್ಣನ್ ನಂಬೂದಿರಿ ಎಂದಾಗಿ ಬದಲಾಯಿಸಿದ್ದನೆಂದೂ, ಆತ ಹಲವು ಗಣ್ಯರೊಂದಿಗೆ  ನಿಕಟ ನಂಟು ಹೊಂದಿರುವ ಬಗ್ಗೆಯೂ  ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಆದ್ದರಿಂದ ತನಿಖಾ ವ್ಯಾಪ್ತಿಗೆ ಇನ್ನಷ್ಟು ಮಂದಿಯನ್ನು ಒಳಪಡಿಸುವ ಸಾಧತೆಯೂ ಇದೆ.

You cannot copy contents of this page