30 ಪವನ್ ಚಿನ್ನಾಭರಣ 4 ಲಕ್ಷ ರೂ. ಕಳವು ನಡೆದ ಮನೆಯ ಸೊಸೆ ಸಾಲಿಗ್ರಾಮದಲ್ಲಿ ಮೃತಪಟ್ಟ ಘಟನೆ ಕೊಲೆಯೆಂದು ಸಾಬೀತು: ಗೆಳೆಯ ಸೆರೆ

ಕಣ್ಣೂರು: ಇತ್ತೀಚೆಗೆ 30 ಪವನ್ ಚಿನ್ನಾಭರಣ, 4 ಲಕ್ಷ ರೂ. ಕಳವು ಹೋದ ಮನೆಯ ಸೊಸೆಯನ್ನು ಕರ್ನಾ ಟಕದ ಸಾಲಿಗ್ರಾಮದ ವಸತಿಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಇದು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಟ್ ಚುಂಗಸ್ತಾನಂ ನಿವಾಸಿ ಎ.ಪಿ. ಸುಭಾಷ್‌ರ ಪತ್ನಿ ದರ್ಶಿತ (22) ಕೊಲೆಗೀಡಾಗಿರುವುದು. ಜೊತೆಗಿದ್ದ ಗೆಳೆಯ ಕರ್ನಾಟಕ ಪಿರಿಯಾಪಟ್ಟಣ ನಿವಾಸಿ ಸಿದ್ಧರಾಜು (22)ನನ್ನು ಸಾಲಿಗ್ರಾಮದಿಂದ ಪೊಲೀಸರು ಬಂಧಿಸಿದ್ದಾರೆ.

ವಸತಿಗೃಹದಲ್ಲಿ ದರ್ಶಿತ ಹಾಗೂ ಸಿದ್ಧರಾಜು ಮಧ್ಯೆ ವಾಗ್ವಾದವುಂಟಾಗಿದ್ದು, ಸಿದ್ಧರಾಜು ದರ್ಶಿತಳ ಬಾಯಿಗೆ ಇಲೆಕ್ಟ್ರಿಕ್ ಡಿಟಾನೇಟರ್ ತುರುಕಿಸಿ ಶಾಕ್ ತಗಲಿಸಿ ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಶುಕ್ರವಾರ ಬೆಳಿಗ್ಗೆ ಕಲ್ಯಾಟ್ ಮನೆಯಿಂದ ಪುತ್ರಿ ಅರುಂದತಿ ಜೊತೆ ದರ್ಶಿತ ಸ್ವಂತ ಮನೆಯಾದ ಕರ್ನಾಟಕದ ಹುಣ್ಸೂರು ಬಿಳಿಕೆರೆಗೆ ತೆರಳಿದ್ದರು. ಅಂದು ಸಂಜೆ ಹೊತ್ತಿಗೆ ಮನೆಯಲ್ಲಿ ಕಳವುಗೈದ ಬಗ್ಗೆ ತಿಳಿದು ಬಂದಿದೆ. ದರ್ಶಿತಳ ಪತಿ ಸುಭಾಶ್ ವಿದೇಶದಲ್ಲಿದ್ದಾರೆ. ಕಲ್ಯಾಟ್ ಮನೆಯಲ್ಲಿ ದರ್ಶಿತರ ಜೊತೆ ಅತ್ತೆ ಸುಮತಿ, ಪತಿಯ ಸಹೋದರ ಸೂರಜ್ ವಾಸಿಸುತ್ತಿದ್ದರು.

ಇವರಿಬ್ಬರು ಅಂದು ಬೆಳಿಗ್ಗೆ ಕೆಲಸಕ್ಕೆಂದು ತೆರಳಿದ್ದರು. ಕೊನೆಯಲ್ಲಿ ದರ್ಶಿತ ಮನೆಗೆ ಬೀಗ ಹಾಕಿ ಹೊರ ಹೋಗಿದ್ದರು. ಸಂಜೆ ಮನೆಗೆ ಹಿಂತಿರುಗಿ ಬಂದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿತ್ತು. ಕೂಡಲೇ ಕರಿಕೋಟಕ್ಕರಿ ಠಾಣೆ ಇನ್ಸ್‌ಪೆಕ್ಟರ್ ಕೆ.ಜೆ. ಬಿನೋಯ್‌ಯವರ ನೇತೃತ್ವದ ತಂಡ ಮನೆಗೆ ತಲುಪಿ ತನಿಖೆಗಾಗಿ ನಿನ್ನೆ ಸಂಜೆ ಕರ್ನಾಟಕಕ್ಕೆ ತೆರಳಿತ್ತು. ಬಳಿಕ ನಡೆಸಿದ ತನಿಖೆಯಲ್ಲಿ ತಿಳಿದು ಬಂದ ವಿಷಯ ವೆಂದರೆ “೧೫ ವರ್ಷಗಳಿಂದ ದರ್ಶಿತ ಹಾಗೂ ಸಿದ್ಧರಾಜು ಪ್ರೀತಿಸುತ್ತಿದ್ದರೆನ್ನ ಲಾಗಿದೆ. ಮೊನ್ನೆ ಇವರಿಬ್ಬರೂ ಜೊತೆಯಾಗಿ ಸಾಲಿಗ್ರಾಮಕ್ಕೆ ತೆರಳಿ ಅಲ್ಲಿನ ವಸತಿಗೃಹದಲ್ಲಿ ತಂಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಉಂಟಾದ ದ್ವೇಷದಿಂದ ಇಲೆಕ್ಟ್ರಿಕ್ ಡಿಟಾನೇಟರ್ ದರ್ಶಿತಳ ಬಾಯಿಗಿಟ್ಟು ಶಾಕ್ ತಗಲಿಸಿ ಸಿದ್ಧರಾಜು ಕೊಲೆಗೈದಿರುವುದಾಗಿ ತಿಳಿದು ಬಂದಿದೆ.

RELATED NEWS

You cannot copy contents of this page