ಕುಂಬಳೆ: ಕುಂಬಳೆ ಮೈಮೂನ್ ನಗರದಲ್ಲಿ ಪದವಿ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಸೀತಾಂಗೋಳಿಯ ಖಾಸಗಿ ಕಾಲೇಜು ವಿದ್ಯಾರ್ಥಿಯೂ, ಕುಂಬಳೆ ಮೈಮೂನ್ ನಗರದ ಹಸನ್ ಎಂಬವರ ಪುತ್ರನಾದ ಮುಹಮ್ಮದ್ ಅಜ್ಸರ್ ಯಾನೆ ಅಜ್ಜು (19) ಮೃತಪಟ್ಟ ವಿದ್ಯಾರ್ಥಿ ಯಾಗಿದ್ದಾನೆ. ಶನಿವಾರ ಸಂಜೆ ಈತ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.
ತಂದೆ, ತಾಯಿ ಖದೀಜ, ಸಹೋದರನಾದ ಅಬ್ದುಲ್ಲ ಎಂಬಿವರು ಮನೆಯಿಂದ ಹೊರಗೆ ತೆರಳಿದ್ದರು. ಅಬ್ದುಲ್ಲರಿಗೆ ಹೊಸ ಬುಲ್ಲೆಟ್ ಬೈಕ್ ಖರೀದಿಸಲೆಂದು ತೆರಳಿದ್ದರೆನ್ನಲಾಗಿದೆ. ಈ ವೇಳೆ ಜತೆಗೆ ಬರುವಂತೆ ಒತ್ತಾಯಿಸಿದರೂ ಆಟವಾಡಲು ಹೋಗಲಿದೆ ಎಂದು ತಿಳಿಸಿ ಅಜ್ಸರ್ ಬಂದಿಲ್ಲವೆಂದು ಅಬ್ದುಲ್ಲ ತಿಳಿಸಿದ್ದಾರೆ. ಇವರು ಸಂಜೆ ಮನೆಗೆ ಮರಳಿದಾಗ ಮನೆಯ ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಕರೆದರೂ ಬಾಗಿಲು ತೆರೆಯದಿರುವುದರಿಂದ ನೆರೆಮನೆ ನಿವಾಸಿಗಳು ಸಹಿತ ತಲುಪಿ ಬಾಗಿಲು ತೆರೆದಾಗ ಮುಹಮ್ಮದ್ ಅಜ್ಸಲ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಆತನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತನು ತಂದೆ, ತಾಯಿ, ಇತರ ಸಹೋದರರಾದ ಸೀನತ್, ಸಫೀದ, ಅರ್ಫಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






