ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವಕ್ಕೆ ನಿನ್ನೆಯಿಂದ ಅದ್ದೂರಿಯ ಚಾಲನೆ ದೊರಕಿದೆ. ಕಾರ್ಯಕ್ರಮ ಸೆಪ್ಟಂಬರ್ ೬ರ ತನಕ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ.
ನಿನ್ನೆ ಆರಂಭಗೊಂಡ ಸಪ್ತತಿ ಮಹೋತ್ಸವವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರೀಯ ಪ್ರಚಾರಕ್ ಪಿ.ಎನ್. ಹರಿಕೃಷ್ಣ ಕುಮಾರ್ ಉದ್ಘಾಟಿಸಿದರು. ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಮೂಲಕ ಸಾಮಾಜಿಕ ಪರಿವರ್ತನೆ ತರಲು ಸಾಧ್ಯವಾಗಿದೆ. ಮಂದಗತಿಯಲ್ಲಿ ಸಾಗುತ್ತಿದ್ದ ಭಾರತದ ಪ್ರಥಮ ಹಂತದ ಸ್ವಾತಂತ್ರ್ಯ ಚಳವಳಿಯ ವೇಳೆ ಸ್ವಾತಂತ್ರ್ಯ ಸಂಗ್ರಾಮ ಸೇನಾನಿ ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವನ್ನು ಆರಂಭಿಸಿ ಆ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಜನ ಜಾಗೃತಿ ಮೂಡಿಸಿ ಅದಕ್ಕೆ ಹೊಸ ಉತ್ತೇಜನ ನೀಡಿದರು. ಸ್ವಾತಂತ್ರ್ಯಕ್ಕಾಗಿರುವ ಹೋರಾಟಕ್ಕೆ ಹೊಸ ಆಯಾಮ ನೀಡಿ ಅದನ್ನು ಮುನ್ನಡೆಸಲು ಹಾಗೂ ಜನರ ಹೃದಯದಲ್ಲಿ ಸಾಮಾಜಿಕ ಪರಿವರ್ತನೆ ತರಲೂ ಗಣೇಶೋತ್ಸವಕ್ಕೆ ಸಾಧ್ಯವಾಗಿದೆಯೆಂದು ಅವರು ಹೇಳಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಸಪ್ತತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಿ.ಎನ್. ಪೊದುವಾಳ್, ಇಚ್ಲಂಪಾಡಿ ಲಕ್ಷ್ಮಣ, ಅಡೂರು ಭಗವತೀ ಕ್ಷೇತ್ರ ಭಂಡಾರ ಮನೆಯ ಕಾರ್ಯದರ್ಶಿ ಮಾಧವನ್ ಮತ್ತು ಪ್ರಭಾಕರನ್ ಕಡಪ್ಪುರ ಮಾತನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್. ಕಮಲಾಕ್ಷ ಸ್ವಾಗತಿಸಿ, ಜಯರಾಮ್ ಶೆಟ್ಟಿ ವಂದಿಸಿದರು.