ಮುಳ್ಳೇರಿಯ: ಮದುವೆ ಆಗ್ರಹವನ್ನು ನಿರಾಕರಿಸಿದ ದ್ವೇಷದಿಂದ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಅಡೂರು ಬಳಿಯ ಮಂಡೆಕೋಲು ನಿವಾಸಿ ಪ್ರತಾಪ್ (30) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಡೂರು ಬಸ್ ವೈಂಟಿಂಗ್ ಶೆಡ್ ಸಮೀಪ ಇದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.
ಮೊನ್ನೆ ಸಂಜೆ ಈ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ೨೯ರ ಹರೆಯದ ಯುವತಿ ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದಾಗ ಏಳೂವರೆಗುರಿ ಎಂಬಲ್ಲಿ ಅಡಗಿ ನಿಂತಿದ್ದ ಆರೋಪಿ ಯುವತಿಯನ್ನು ತಡೆದು ನಿಲ್ಲಿಸಿ ಆಕೆಯ ಕುತ್ತಿಗೆಗೆ ಇರಿದು ಗಾಯಗೊಳಿಸಿರುವುದಾಗಿ ಆದೂರು ಪೊಲೀಸರು ದಾಖಲಿಸಿ ಕೊಂಡ ಪ್ರಕರಣ ದಲ್ಲಿ ತಿಳಿಸಲಾಗಿದೆ. ಆರೋಪಿಯ ಇರಿತವನ್ನು ತಡೆದು ದರಿಂದ ಯುವತಿ ಜೀವಾಪಾಯದಿಂದ ಪಾರಾಗಿದ್ದಾಳೆನ್ನಲಾಗಿದೆ.
ಯುವತಿ ವಿವಾಹಿತೆಯಾಗಿದ್ದು, ಆಕೆಯ ಪತಿಯೊಂದಿಗಿನ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಲಾಗಿದೆ. ಈಮಧ್ಯೆ ಪತಿಯ ಸ್ನೇಹಿತನಾದ ಪ್ರತಾಪ್ ಯುವತಿಯೊಂದಿಗೆ ಸ್ನೇಹದಲ್ಲಿದ್ದನು.
ಇದೇ ವೇಳೆ ಪ್ರತಾಪ್ ಯುವತಿಯೊಂದಿಗೆ ವಿವಾಹ ಬೇಡಿಕೆ ಮುಂದಿರಿಸಿದ್ದು, ಅದನ್ನು ಆಕೆ ನಿರಾಕರಿಸಿದ್ದಳೆಂದು ಪ್ರಕರಣದಲ್ಲಿ ತಿಳಿಸಲಾಗಿದೆ.