ತಿರುವನಂತಪುರ: ಮುಂಗಾರುಮಳೆ ಬಳಿಕ ರಾಜ್ಯದಲ್ಲಿ ಸ್ವಾತಿ ಮಳೆ ಸುರಿಯಲಾರಂಭಿಸಿರು ವಂತೆಯೇ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದೇ ವೇಳೆ ಇಡುಕ್ಕಿ ಜಿಲ್ಲೆಯಲ್ಲಿ ನಿನ್ನೆಯಿಂದ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು ಇದರಿಂದ ಜಿಲ್ಲೆಯ ಕಟ್ಟಪನ, ಕುಳಂದಪ್ಪಾರೆ ಯಲ್ಲಿ ಇಂದು ಮುಂಜಾನೆ ಭಯಂಕರ ಸದ್ದಿ ನೊಂದಿಗೆ ಭಾರೀ ಭೂಕುಸಿತವುಂ ಟಾಗಿದೆ. ಮಾತ್ರವಲ್ಲ ಈ ಪ್ರದೇಶದ ಹಲವು ರಸ್ತೆಗಳು ಮತ್ತು ಕೃಷಿ ತೋಟಗಳು ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದಾಗಿ ಈ ಪ್ರದೇಶದ 50ಕ್ಕೂ ಹೆಚ್ಚು ಮನೆಯವರನ್ನು ಅಲ್ಲಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. 2019ರಲ್ಲಿ ಭೂಕುಸಿತ ಸಂಭವಿಸಿದ ಅದೇ ಪ್ರದೇಶದಲ್ಲಿ ನಿನ್ನೆ ಮತ್ತೆ ಭೂಕುಸಿತ ಸಂಭವಿಸಿದೆ. ಹಲವು ಮನೆಗಳಿಗೆ ಪ್ರವಾಹ ಆವರಿಸಿದ್ದು, ಅಂತಹ ಮನೆಯಲ್ಲಿ ಸಿಲುಕಿಕೊಂಡ ವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದರ ಹೊರತಾಗಿ ಇದೇ ಜಿಲ್ಲೆಯ ನಡುಕಂ ಡಂನಲ್ಲ್ಲೂ ಭೂಕುಸಿತ ಉಂಟಾಗಿದೆ. ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಧಾರಾಕಾರ ಮಳೆಯಿಂದಾಗಿ ಕಲ್ಲೂರು ಅಣೆಕಟ್ಟಿನಲ್ಲಿ ನೀರು ತುಂಬತೊಡಗಿದ್ದು, ಅದರಿಂದಾಗಿ ಶಟರ್‌ಗಳನ್ನು ತೆರೆದು ನೀರು ಹೊರಬಿಡುವ ಕ್ರಮ ಕೈಗೊಳ್ಳಲಾಗಿದೆ.
ಇದರ ಹೊರತಾಗಿ ನೈಯ್ಯಾರು ಅಣೆಕಟ್ಟಿನ ಶೆಟರ್‌ಗಳನ್ನು ಇಂದು ಬೆಳಿಗ್ಗೆ ತೆರೆಯಲಾಯಿತು. ಮಾತ್ರವಲ್ಲ ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರು ನಿಗದಿತ ಮಟ್ಟಕ್ಕಿಂತ ಏರತೊಡಗಿದ್ದು ಅದರಿಂದ ಅಣೆಕಟ್ಟಿನ ಶೆಟರ್ ತೆರೆದು ನೀರು ಬಿಡುವಂತೆ ನಿರ್ದೇಶ ನೀಡಲಾಗಿದೆ.
ಇದರ ಹೊರತಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಸುರಿಯುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಇಂತಹ ನಿರ್ದೇಶ ನೀಡಲಾಗಿಲ್ಲವಾದರೂ ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆ ಲಭಿಸುವ ಸಾಧ್ಯತೆ ಇದೆಯೆಂದೂ ಹವಾಮಾನ ಇಲಾಖೆ ತಿಳಿಸಿದೆ.