ಕುಂಬಳೆ: ಗುಡ್ಡೆ ಕುಸಿತ ಮುಂದುವರಿಯುತ್ತಿರುವ ಮೊಗ್ರಾಲ್‌ಪುತ್ತೂರು ಕಲ್ಲಂಗೈ ಎಎಲ್‌ಪಿ ಶಾಲೆ ಬಳಿ ಗೋಡೆ ಕಟ್ಟಿ ಸಂರಕ್ಷಣೆ ಖಚಿತಪಡಿಸುವುದರಲ್ಲಿ ಅಧಿಕಾರಿಗಳು ಅನಾಸ್ಥೆ ತೋರುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಮೂಲಕ ಇರುವ ಪ್ರಯಾಣಿಕರಿಗೆ ಬೆದರಿಕೆಯಾಗುತ್ತಿದೆ. ಸ್ಥಳೀಯರು ಆತಂಕದಲ್ಲಿದ್ದಾರೆ. ಈ ಮೊದಲು ಕೂಡಾ ಈ ಬಗ್ಗೆ ಸುದ್ಧಿ ಪ್ರಕಟಗೊಂಡಿತ್ತು. ಶಾಲಾ ಮೆನೇಜ್‌ಮೆಂಟ್ ಇದುವರೆಗೂ ಈ ಬಗ್ಗೆ ಬಾಯಿ ತೆರೆದಿಲ್ಲ. ಈ ಮೂಲಕ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಶಾಲಾ ಕಟ್ಟಡ ಭಾರೀ ಬೆದರಿಕೆಯೊಡ್ಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಮಣ್ಣು ತೆಗೆದಾಗ ಶಾಲಾ ಕಟ್ಟಡ ಅಪಾಯಕರ ಸ್ಥಿತಿಗೆ ತಲುಪಿತು. ಈ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಅನ್‌ಫಿಟ್ ಎಂದು ಘೋಷಿಸಲಾಗಿತ್ತು. ಇದೇ ವೇಳೆ ಗುಡ್ಡೆ ಕುಸಿಯುವ ಸ್ಥಳದಲ್ಲಿ ಕಾಂಕ್ರೀಟ್ ಬಿತ್ತಿಯನ್ನು ನಿರ್ಮಿಸಿ ಸಂರಕ್ಷಿಸಬೇಕೆಂದು ಶಾಲಾ ಮೆನೇಜ್‌ಮೆಂಟ್ ರಸ್ತೆ ಗುತ್ತಿಗೆದಾರರಲ್ಲಿ ಆಗ್ರಹಿಸಿರುವುದಾಗಿಯೂ ಹೇಳಲಾಗುತ್ತಿದೆ. ಆದರೆ ತಮಗೆ ರಸ್ತೆಯ ಗುತ್ತಿಗೆ ಮಾತ್ರವಿರುವುದು ಎಂದು ಅವರು ತಿಳಿಸಿರುವುದಾಗಿಯೂ ಹೇಳಲಾಗುತ್ತಿದೆ. ಈ ಶಾಲೆಯ ಬಳಿ ಮಕ್ಕಳು ಆಟವಾಡುತ್ತಿರುವುದು ಕಂಡು ಬರುತ್ತಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ.







