ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ಹಿಂದೆ ಕಮ್ಯೂನಿಸ್ಟರು- ಹಿಂದೂ ಐಕ್ಯವೇದಿ ಆರೋಪ

ಕಾಸರಗೋಡು: ಹಿಂದುಗಳ ಪವಿತ್ರ ಆರಾಧನಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕಮ್ಯುನಿಸ್ಟರು ಮತ್ತು ಇಸ್ಲಾಂ ಮತೀಯ ಸಂಘಟನೆಗಳು ಸುಳ್ಳು ಕತೆಗಳನ್ನು ಕಟ್ಟಿ ನಿರಂತರ ಅಪ ಪ್ರಚಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧವೆಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಖಂಡಿಸಿದೆ. ಜೈನಧರ್ಮ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕೇರಳದ ಯೂಟ್ಯೂಬರ್‌ಗಳಲ್ಲಿ ಕೆಲವರು ನಿರಂತರವಾಗಿ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದೆ. ಕೇರಳದಲ್ಲಿ ಅಲ್ಪ ಸಂಖ್ಯಾತರು ನಡೆಸುವ ಡಿವೈನ್ ಧ್ಯಾನಕೇಂದ್ರದಲ್ಲಿ ನೂರಾರು ಜನರು ಅನುಮಾನಾಸ್ಪದವಾಗಿ ಅಸಹಜ ಸಾವು ಹೊಂದಿದ್ದು, ಇದರ ಬಗ್ಗೆ ದೂರು ನೀಡಿದರೂ ಕೇರಳವನ್ನಾಳಿದ ಎಡ-ಬಲ ಸರಕಾರಗಳು ಇದುವರೆಗೆ ಸರಿಯಾದ ತನಿಖೆ ನಡೆಸಿಲ್ಲವೆಂದು ಹಿಂದೂ ಐಕ್ಯವೇದಿ ದೂರಿದೆ. ಕೆಲವು ಪೈಡ್ ಮಾಧ್ಯಮಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿದ್ದು, ಶಬರಿಮಲೆಯ ಬಗ್ಗೆ ಅಪ ಪ್ರಚಾರ ನಡೆಸಿದ ಕಮ್ಯೂನಿಸ್ಟರು ಇಂದು ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿರುವುದಾಗಿ ಸಮಿತಿ ದೂರಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳವು ಕೇರಳದ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಿದ್ದು, ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಜನಸಾಮಾನ್ಯರನ್ನು ಸಮಾಜದ ಮುಖ್ಯವಾಹಿನಿಗೆ ತಂದಿರುತ್ತದೆ. ಹಲವಾರು ವಿಧವೆಯರಿಗೆ, ಅನಾರೋಗ್ಯ ಪೀಡಿತರಿಗೆ ಪ್ರತೀ ತಿಂಗಳು ಮಾಶಾಸನ ನೀಡುತ್ತಿದೆ. ವಿದ್ಯಾರ್ಥಿವೇತನ, ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ, ಉನ್ನತಿ ಕೇಂದ್ರಗಳ ಶುಚೀಕರಣ, ವಿಮೆ ಸೌಲಭ್ಯ, ಸಾಲ ಸೌಲಭ್ಯ ಅಲ್ಲದೆ ನೂರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ಈ ರೀತಿ ಸಹಾಯ ನೀಡುವ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುವುದನ್ನು ಹಿಂದೂ ಸಮಾಜ ಒಟ್ಟಾಗಿ ವಿರೋಧಿಸಬೇಕಾಗಿದೆ. ಧರ್ಮಸ್ಥಳದ ಪರವಾಗಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯು ನಡೆಸುವ ಹೋರಾಟಗಳಿಗೆ ಹಿಂದೂ ಐಕ್ಯವೇದಿ ಪೂರ್ಣ ಬೆಂಬಲ ನೀಡಲಿದೆ ಎಂದು ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ಸುರೇಶ್ ಶಾಂತಿಪಳ್ಳ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಪ್ರತಾಪನಗರ, ಪ್ರಧಾನ ಕಾರ್ಯದರ್ಶಿ ಸಂದೀಪ್ ಗಟ್ಟಿ ದೇವಿನಗರ, ಮುಖಂಡರಾದ ಸುಕುಮಾರ್ ಅನಂತಪುರ, ವಸಂತಿ ಕೃಷ್ಣ ಕುಂಬಳೆ, ಸ್ವಸ್ತಿಕ್ ಪುತ್ತಿಗೆ, ರೋಹಿತ್ ಮಂಡೆಕಾಪು, ಮೋಹಿತ್ ಮಂಡೆಕಾಪು, ಅಜಿತಾ ಟೀಚರ್ ಅನಂತಪುರ, ವಿಜಯ ಟೀಚರ್ ಅನಂತಪುರ, ಸುನಿತಾ ಟೀಚರ್ ಕುಂಬಳೆ, ಶಶಿಕಲಾ ಬಂಬ್ರಾಣ, ಎಸ್. ಸುರೇಶ್ ಪ್ರತಾಪನಗರ, ವೇಣುಗೋಪಾಲ್ ಪುತ್ತಿಗೆ, ಆಶ್ಲೇಷ ಆಚಾರ್ಯ ಕುಂಬಳೆ, ಮಣಿ ವೀರನಗರ, ಪ್ರೀತಂ ವೀರನಗರ ಇವರು ತಿಳಿಸಿದ್ದಾರೆ.

You cannot copy contents of this page