ಕುಂಬಳೆ: ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ತೆಗೆದು ಸಾಗಾಟ ನಡೆಸುವ ವಾಹನಗಳ ಆರ್.ಸಿ. ಮಾಲಕರ ವಿರುದ್ಧ ಕಳವು ಆರೋಪ ಹೊರಿಸಿ ಅವರನ್ನು ಬಂಧಿಸಲು ಕುಂಬಳೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿನ್ನೆ ಮುಂಜಾನೆ ಕುಂಬಳೆ, ಮೊಗ್ರಾಲ್ ಅಂಡರ್ಪಾಸ್ಗಳ ಮೂಲಕ ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಆ ಲಾರಿಗಳ ಚಾಲಕರು ಓಡಿ ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಲಾರಿಗಳ ಆರ್ಸಿ ಮಾಲಕರ ವಿರುದ್ಧ ಕೇಸು ದಾಖ ಲಿಸಲು ಹಾಗೂ ಅವರನ್ನು ಬಂಧಿಸಲು ಎಸ್ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಅನಧಿಕೃತ ಹೊಯ್ಗೆ ಸಾಗಾಟ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಪೊಲೀಸರ ಕಣ್ತಪ್ಪಿಸಿ ಹೊಯ್ಗೆ ಸಾಗಾಟ ನಡೆಯು ತ್ತಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆ ಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನಗಳನ್ನು ವಶಪಡಿಸಿದರೂ ಚಾಲಕರನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ವಶಪಡಿಸುವ ವಾಹನಗಳ ಆರ್ಸಿ ಮಾಲಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಹಾಗೂ ಚಾಲಕರ ವಿರುದ್ಧವೂ ಕಳವು ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.







