ನಗರದಲ್ಲಿ ರಸಮಂಜರಿ ಕಾರ್ಯಕ್ರಮ ವೇಳೆ ಪ್ರೇಕ್ಷಕರ ಭಾರೀ ನೂಕುನುಗ್ಗಲು: ಉಸಿರುಗಟ್ಟುವ ವಾತಾವರಣ; ಕುಸಿದುಬಿದ್ದು 12ಕ್ಕೂ ಹೆಚ್ಚು

ಮಂದಿ ಆಸ್ಪತ್ರೆಯಲ್ಲಿ, ಲಾಠಿ ಪ್ರಯೋಗಿಸಿದ ಪೊಲೀಸರು, ಸಂಘಟಕರ ವಿರುದ್ಧ ಕೇಸು

ಕಾಸರಗೋಡು: ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ  ಪ್ರೇಕ್ಷಕರ ಅಭೂತಪೂರ್ವ ಸಂದಣಿಯಿಂದಾಗಿ ಭಾರೀ ನೂಕುನುಗ್ಗಲು ಹಾಗೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ೧೨ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ನಗರದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿಯ ಖಾಸಗಿ ಸ್ಥಳದಲ್ಲಿ ಎಫ್‌ಎಲ್‌ಇಎ ಎಂಬ ಹೆಸರಲ್ಲಿ  ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ೩೦೦೦ ಪ್ರೇಕ್ಷಕರು ಭಾಗವಹಿಸುವ ಸೌಕರ್ಯ ಏರ್ಪಡಿಸಲಾಗಿದೆ. ಆದರೆ ನಿನ್ನೆ ಸಂಜೆ ೩೦೦೦ಕ್ಕಿಂತಲೂ  ಇಮ್ಮಡಿ ಪ್ರೇಕ್ಷಕರು ಬಂದಿದ್ದರು. ಅದರಿಂದಾಗಿ ಕಾರ್ಯಕ್ರಮ  ನಡೆಯುವ ಸಭಾಂಗಣದ ಒಳಗೆ ಹಾಗೂ ಹೊರಗೆ ಭಾರೀ ನೂಕು ನುಗ್ಗಲು ಉಂಟಾಗಿ ಉಸಿರುಗಟ್ಟುವ ವಾತಾವರಣವೂ ನಿರ್ಮಾಣವಾಯಿತು. ಅದರಿಂದಾಗಿ ನೂಕು ನುಗ್ಗಲಿನಲ್ಲಿ ಸಿಲುಕಿ ೧೨ಕ್ಕೂ ಹೆಚ್ಚು ಮಂದಿ ಕುಸಿದು  ಬಿದ್ದರು. ಬಳಿಕ ಅವರನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದು ಜಿಲ್ಲಾ  ವರಿಷ್ಠ ಪೊಲೀಸ್ ಅಧಿಕಾರಿ ಆಗಮಿಸಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಸಭಾಂಗಣದೊಳಗೆ ಹಾಗೂ ಹೊರಗೆ ನೆರೆದಿದ್ದ ಪ್ರೇಕ್ಷಕರನ್ನು  ಜಾಗ ತೆರವುಗೊಳಿಸುವಂತೆ ನಿರ್ದೇಶ ನೀಡಿದರೂ ಹಲವರು ಅದಕ್ಕೆ ತಯಾರಾಗಲಿಲ್ಲ. ಕೊನೆಗೆ ಪೊಲೀಸರು ಪ್ರೇಕ್ಷಕರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಬೇಕಾಗಿ ಬಂತು. ಇದಕ್ಕಾಗಿ ಪೊಲೀಸರು  ಲಘು ಲಾಠಿ ಪ್ರಹಾರ ನಡೆಸಬೇಕಾಗಿ ಬಂತು. ಪೊಲೀಸರು ಸಕಾಲದಲ್ಲಿ ಆಗಮಿಸದೇ ಇದ್ದಲ್ಲಿ ಭಾರೀ ದುರಂತ ಸಂಭವಿಸುವ ಸಾಧ್ಯತೆಯೂ ಇತ್ತು.ಅಂತಹ  ಸಾಧ್ಯತೆಯನ್ನು  ಪೊಲೀಸ್ ಕಾರ್ಯಾಚರಣೆಯಿಂದ ಅದೃಷ್ಟವಶಾತ್ ತಪ್ಪಿಹೋಯಿತು.  ಇದಕ್ಕೆ ಸಂಬಂಧಿಸಿ ಸಭಾಂಗಣದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಭಾಗವಹಿಸುವಂತೆ ಮಾಡಿದ ಹಾಗೂ ಪೊಲೀಸರ ಸರಿಯಾದ ಮುನೆಚ್ಚರಿಕೆಯನ್ನು ಪಾಲಿಸದೆ ಅದಕ್ಕೆ ವಿರುದ್ಧವಾಗಿ  ಅಸಂಖ್ಯಾತ ಪ್ರೇಕ್ಷಕರಿಗೆ ಪ್ರವೇಶನೀಡಿ ಆ ಮೂಲಕ ಜನರ ಸುರಕ್ಷತೆ ಪಾಲಿಸದ ರೀತಿಯಲ್ಲಿ ಕಾರ್ಯವೆಸಗಿದ ಆರೋಪದಂತೆ ಪ್ರಸ್ತುತ ಕಾರ್ಯಕ್ರಮ ಆಯೋಜಿಸಿದ ಸಂಘಟಕರಾದ ಶಹಝಾನ್ ತೊಟ್ಟಾನ್, ನವಲು ರಹಿಮಾನ್,ಹ್ಯಾರೀಸ್‌ಅಬೂಬಕರ್, ಖಾಲೀದ್ ಇ.ಎಂ, ಝುಬೈರ್ ಮತ್ತು ಕಂಡಲ್ಲಿ ಗುರುತು ಹಚ್ಚಲು ಸಾಧ್ಯವಾಗುವ ಇತರ ಆರು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page