ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಮಾನವ ಅಸ್ತಿ ಪಂಜರ ಪತ್ತೆ: ಉನ್ನತ ಮಟ್ಟದ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನೆ

ಕಾಸರಗೋಡು: ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಮಾನವ ಅಸ್ತಿಪಂಜರ ಪತ್ತೆಯಾಗಿದೆ. ಚೆರ್ಕಳಕ್ಕೆ ಸಮೀಪದ ಪಡಿಞ್ಞಾರಮೂಲೆ ಕುಂಞಿಕಾನದ ಅಬ್ದುಲ್ಲ ಎಂಬವರ ಹಿತ್ತಿಲಲ್ಲಿ ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಈ ಅಸ್ತಿ ಪಂಜರ ಪತ್ತೆಯಾಗಿದೆ. ಮಕ್ಕಳು ನಿನ್ನೆ ಅಪರಾಹ್ನ ಮೀನು ಹಿಡಿಯಲೆಂದು  ಆ ಕೆರೆಗೆ ಹೋದಾಗ ಅವರು ಮೊದಲು ಅಸ್ತಿಪಂಜರ ಪತ್ತೆಹಚ್ಚಿದ್ದಾರೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್, ಎಸ್.ಐ.ಗಳಾದ ವಿಜಯನ್ ಮೇಲೋತ್ತ್, ಕೆ. ಉಮೇಶನ್‌ರ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದು ಬೇಸಿಗೆ ಕಾಲದಲ್ಲಿ ನೀರಾವರಿಗಾಗಿ ಉಪಯೋಗಿಸುವ ಕೆರೆಯಾಗಿದೆ. ತಲೆಬುರುಡೆ, ಬೆನ್ನೆಲುಬು ಮತ್ತು ಇತರ ಎಲುಬುಗಳು ಇಲ್ಲಿ ಪತ್ತೆಯಾಗಿವೆ. ಅದನ್ನೆಲ್ಲಾ ಪೊಲೀಸರು ಸಂಗ್ರಹಿಸಿ ಜನರಲ್ ಆಸ್ಪತ್ರೆಗೆ ಸಾಗಿಸಿದರು.  ಉನ್ನತ ಮಟ್ಟದ ಪರೀಕ್ಷೆಗಾಗಿ ಈ ಅಸ್ತಿ ಪಂಜರವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಚೆರ್ಕಳ ಪರಿಸರದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದರು. ಆ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು. ಇದು ಆ ವ್ಯಕ್ತಿಯ ಅಸ್ತಿಪಂಜರವಾಗಿದೆಯೇ ಎಂಬ ಶಂಕೆ ಉಂಟಾಗಿದೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page