ಕಾಯಂಕುಳಂ: ಪತ್ನಿ ಎರಡು ತಿಂಗಳಿಂದ ನಾಪತ್ತೆಯಾಗಿದ್ದುದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇದೇ ವೇಳೆ ಪೊಲೀಸರು ನಡೆಸಿದ ಶೋಧ ವೇಳೆ ಕಣ್ಣೂರಿನಲ್ಲಿ ಹೋಂನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪತ್ನಿಯನ್ನು ಪತ್ತೆ ಹಚ್ಚಲಾಗಿದೆ.
ಕಣ್ಣಂಬಳ್ಳಿ ಭಾಗಂ ವಿಷ್ಣುಭವನದ ವಿನೋದ್ (49) ಎಂಬವರು ಸಾವಿಗೀಡಾದ ವ್ಯಕ್ತಿ. ಇವರ ಪತ್ನಿ ರಂಜಿನಿ ಕಳೆದ ಜೂನ್ 11ರಂದು ಬೆಳಿಗ್ಗೆ ಬ್ಯಾಂಕ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಅನಂತರ ಅವರು ಮನೆಗೆ ಮರಳಿ ಬಂದಿರಲಿಲ್ಲ. ಈ ಬಗ್ಗೆ ದೂರು ಲಭಿಸಿದ ಪೊಲೀಸರು ನಡೆಸಿದ ತನಿಖೆಯಲ್ಲಿ ರಂಜಿನಿ ಬ್ಯಾಂಕ್‌ಗೂ ತೆರಳಿಲ್ಲವೆಂದು ತಿಳಿದು ಬಂತು. ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಹಚ್ಚಲಾಗಲಿಲ್ಲ. ಇದರಿಂದ ವಿನೋದ್ ಸಾಮಾಜಿಕ ತಾಣಗಳಲ್ಲಿ ಸಾಲಗಳನ್ನು ತೀರಿಸುವುದಾಗಿಯೂ ಪತ್ನಿ ಎಲ್ಲಿದ್ದರೂ ಮರಳಿ ಬರಬೇಕೆಂದು ವಿನಂತಿಸಿದ್ದರು.
ಆದರೂ ಯಾವುದೇ ಪ್ರತಿಕ್ರಿಯೆ ಉಂಟಾಗಿಲ್ಲ. ಇದೇ ವೇಳೆ ರಂಜನಿಯ ಕೈಯಲ್ಲಿ ಮೊಬೈಲ್ ಫೋನ್ ಇಲ್ಲದುದರಿಂದ ಪತಿಯ ವಿನಂತಿಯೂ ಗಮನಕ್ಕೆ ಬಂದಿಲ್ಲ. ಪತ್ನಿಯ ಕುರಿತು ಯಾವುದೇ ಮಾಹಿತಿ ಇಲ್ಲದುದರಿಂದ ಮನನೊಂದು ವಿನೋದ್ ಆತ್ಮಹತ್ಯೆ ಗೈದಿದ್ದಾರೆಂದು ಪೊಲೀಸರು ತಿಳಿಸುತ್ತಿದ್ದಾರೆ. ವಿನೋದ್‌ರ ಅಂತ್ಯ ಸಂಸ್ಕಾರ ನಡೆದ ಬೆನ್ನಲ್ಲೇ ಪತ್ನಿಯನ್ನು ಪತ್ತೆಹಚ್ಚಲಾಗಿದೆ. ಕುಟುಂಬಶ್ರೀ ಕಾರ್ಯ ದರ್ಶಿಯಾದ ರಂಜಿನಿ 1.25 ಲಕ್ಷ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಇದು ಸೇರಿ 3 ಲಕ್ಷ ರೂಪಾಯಿಗಳ ಸಾಲ ಇದೆಯೆನ್ನಲಾಗಿದೆ. ಮೃತ ವಿನೋದ್‌ಗೆ ವಿಷ್ಣು, ದೇವಿಕ ಎಂಬಿಬ್ಬರು ಮಕ್ಕಳಿದ್ದಾರೆ.