ಹೊಳೆಗಳಿಂದ ಅನಧಿಕೃತ ಹೊಯ್ಗೆ ಸಂಗ್ರಹ, ಸಾಗಾಟ ದಂಧೆ ಮತ್ತೆ ಸಕ್ರಿಯ: ಶಿರಿಯ ಹೊಳೆಯ ಪಾಚಾಣಿಯಲ್ಲಿ  ಅನಧಿಕೃತ ಕಡವು, ಎರಡು ದೋಣಿಗಳ ನಾಶ

ಕುಂಬಳೆ: ಕುಂಬಳೆ ಸಮೀಪದ ವಿವಿಧ ಹೊಳೆಗಳಿಂದ ಅನಧಿಕೃತ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಮತ್ತೆ ತೀವ್ರಗೊಂಡಿದೆ. ಇದರ ವಿರುದ್ಧ ಕಾರ್ಯಾಚರಣೆಗಿಳಿದ ಪೊಲೀಸರು  ವಿವಿಧೆಡೆಗೆ ವ್ಯಾಪಕ ದಾಳಿ ಆರಂಭಿಸಿದ್ದಾರೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಎರಡು ದೋಣಿಗಳನ್ನು ಹಾಗೂ ಒಂದು ಅನಧಿಕೃತ ಕಡವನ್ನು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಶಿರಿಯ ಹೊಳೆಯ ಪಾಚಾಣಿ ಸಮೀಪ ಅನಧಿಕೃತ ಕಡವು ಕಾರ್ಯಾಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಎಸ್‌ಐ  ಎಸ್.ಅನೂಪ್, ಎಎಸ್‌ಐ ಅತುಲ್‌ರಾಂ ಒಳಗೊಂಡ ತಂಡ ಅಲ್ಲಿಗೆ ದಾಳಿ ನಡೆಸಿದೆ. ಈ ವೇಳೆ ಅಲ್ಲಿದ್ದ ಕಡವು ಹಾಗೂ ಎರಡು ದೋಣಿಗಳನ್ನು ನಾಶಪಡಿಸಲಾಯಿತು.

ಪಾಚಾಣಿ, ಕಲ್ಪಾರೆ, ಇಚ್ಲಂಗೋಡು, ಉಳುವಾರ್ ಎಂಬಿಡೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯೂ ಇದೇ ರೀತಿ ಅನಧಿಕೃತ ಕಡವು ನಿರ್ಮಿಸಿ ವ್ಯಾಪಕ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸಲಾ ಗುತ್ತಿತ್ತು. ಅದರ ವಿರುದ್ಧ ಪೊಲೀಸರು ಕಠಿಣ ಕ್ರಮ ಆರಂಭಿಸು ವುದರೊಂದಿಗೆ ಹೊಯ್ಗೆ ಮಾಫಿಯಾಗಳು ದಂಧೆಯಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಹೊಯ್ಗೆ ಮಾಫಿಯಾಗಳು ತಮ್ಮ ಕೃತ್ಯದಲ್ಲಿ ತೊಡಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಇದರಿಂದ  ಅನಧಿಕೃತ ಹೊಯ್ಗೆ ಸಂಗ್ರಹ, ಸಾಗಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಸ್‌ಐ ಎಸ್. ಅನೂಪ್ ತಿಳಿಸಿದ್ದಾರೆ.

RELATED NEWS

You cannot copy contents of this page