ಕಾಸರಗೋಡು: ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ವೈದ್ಯರೋರ್ವರಿಗೆ ಬೆದರಿಕೆಯೊಡ್ಡಿ ಅವರಿಂದ ಸೈಬರ್ ವಂಚಕರು 1.10 ಕೋಟಿ ರೂ. ಕಬಳಿಸಿದ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನೀಲೇಶ್ವರದ ವೈದ್ಯರು ಈ ಬಗ್ಗೆ ದೂರು ನೀಡಿದ್ದು ಅದರಂತೆ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ಈ ತಿಂಗಳ 4ರಿಂದ 15ರ ಅವಧಿಯಲ್ಲಿ ಮೂರು ಬಾರಿಯಾಗಿ ವೈದ್ಯರ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ಹಣ ಎಗರಿಸಿದ್ದಾರೆ. ಪೊಲೀಸರೆಂಬ ನಕಲಿ ಹೆಸರಲ್ಲಿ ಸೈಬರ್ ವಂಚಕರು ಈ ವೈದ್ಯರನ್ನು ಕರೆದು ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ಹಣ ಎಗರಿಸಿರುವುದಾಗಿ ಅವರು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಡಿಜಿಟಲ್ ಅರೆಸ್ಟ್ ಎಂಬ ವ್ಯವಸ್ಥೆಯೇ ಇಲ್ಲವೆಂದೂ ಇದರಿಂದಾಗಿ ಜನರು ಜಾಗ್ರತೆ ಪಾಲಿಸಬೇಕೆಂದು ಸೈಬರ್ ಪೊಲೀಸರು ಮುನ್ನೆಚ್ಚರಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ಸೈಬರ್ ವಂಚನೆಗಾರರು ಹಣ ಎಗರಿಸಲು ಹಲವು ರೀತಿಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ವಂಚನೆಗಾರರು ಮೊಬೈಲ್ ಫೋನ್‌ನಲ್ಲಿ ಕರೆದಲ್ಲಿ ಆ ಕುರಿತಾದ ಮಾಹಿತಿಯನ್ನು ತಕ್ಷಣ ಸೈಬರ್ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ. ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ಹಣ ಲಪಟಾಯಿಸುವ ಅಂತಾರಾಷ್ಟ್ರೀಯ ಸೈಬರ್ ರಿಕ್ರೂಟ್‌ಮೆಂಟ್ ಏಜೆಂಟರುಗಳು ಕಾಸರಗೋಡು ಜಿಲ್ಲೆಯಲ್ಲೂ ಕಾರ್ಯವೆಸಗುತ್ತಿದ್ದಾರೆಂಬ ಕೆಲವೊಂದು ಸುಳಿವು ಪೊಲೀಸರಿಗೆ ಲಭಿಸಿದೆ. ಇಂತಹ ಏಜೆಂಟರುಗಳು ನೀಡುವ ಫೋನ್ ನಂಬ್ರಗಳನ್ನು ಬಳಸಿ ಈ ರೀತಿಯ ಆರ್ಥಿಕ ವಂಚನೆ ನಡೆಸಲಾಗುತ್ತಿದೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಅದರ ಜಾಡು ಹಿಡಿದು ಸೈಬರ್ ಪೊಲೀಸರು ಸಮಗ್ರ ಆರಂಭಿಸಿದ್ದಾರೆ.






