ನಗರದಿಂದ ಯುವಕನನ್ನು ಅಪಹರಿಸಿದ ಪ್ರಕರಣ ಹಿಂದೆ ಅಂತಾರಾಜ್ಯ ಜಾಲ: ಆರೋಪಿಯ ಮನೆಯಿಂದ ಬೃಹತ್ ಪ್ರಮಾಣದ ಖೋಟಾನೋಟು, ನೋಟು ಎಣಿಕೆ ಯಂತ್ರ ಪತ್ತೆ

ಕಾಸರಗೋಡು: ಡಿ. 17ರಂದು ಕಾಸರಗೋಡು ನಗರದ ಅಶ್ವಿನಿನಗರದಿಂದ ಹಾಡಹಗಲೇ ಮೇಲ್ಪರಂಬ ನಿವಾಸಿ ಹಸೀಫಾ ಎಂಬವರನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿದ ಪ್ರಕರಣದ ಆರೋಪಿಯೋರ್ವನ ಮನೆಯಲ್ಲಿ ಕಾಸರಗೋಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ ಬೃಹತ್ ಪ್ರಮಾಣದ ಖೋಟಾನೋಟುಗಳು ಹಾಗೂ ನೋಟುಗಳನ್ನು ಎಣಿಸಲು ಉಪಯೋಗಿಸುವ ಯಂತ್ರವನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಯುವಕನನ್ನು ಅಪಹರಿಸಿದ ಪ್ರಕರಣದ ಆರೋಪಿ ಗಳಲ್ಲೋರ್ವನಾಗಿರುವ ಚಟ್ಟಂಚಾಲ್ ಬೆಂಡಿಚ್ಚಾಲ್‌ನ ಕೆ. ವಿಜಯನ್ (55) ಎಂಬಾತನ ಚೆರ್ಕಳ ಕೋಲಾಚಿ ಯಡ್ಕದಲ್ಲಿರುವ ಮನೆಯ ಶೆಡ್‌ನಲ್ಲಿ ಈ ಖೋಟಾ ನೋಟುಗಳನ್ನು ಪತ್ತೆಹಚ್ಚಲಾಗಿದೆ. ಅಮಾನ್ಯ ನೋಟು ಗಳಾಗಿರುವ 2೦೦೦ ರೂ. ಮುಖಬೆಲೆಯ 2500 ಖೋಟಾನೋಟು ಗಳು, 1000 ಮುಖಬೆಲೆಯ 50 ಖೋಟಾನೋಟುಗಳು, ಅಮಾನ್ಯಗೊಳಿಸಲಾಗಿರುವ 5೦೦ ರೂ. ಮುಖಬೆಲೆಯ 1೦೦ ನೋಟುಗಳು ಹಾಗೂ ಅವುಗಳನ್ನು ಎಣಿಸಲು ಉಪಯೋಗಿಸುವ ಯಂತ್ರವನ್ನು ಪೊಲೀಸರು ಅಲ್ಲಿಂದ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆಯ ಎಸ್.ಐ. ಕೆ. ರಾಜೀವ್‌ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಯುವಕನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿರುವ ಎಂಟು ಮಂದಿ ಆರೋಪಿಗಳ ಪೈಕಿ ವಿಜಯನ್‌ನನ್ನು ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದಾಗ ಚೆರ್ಕಳ ಕೋಲಾಚಿಯಡ್ಕದಲ್ಲಿರುವ ಆತನ ಮನೆಯಲ್ಲಿ ಖೋಟಾನೋಟುಗಳನ್ನು ಬಚ್ಚಿಟ್ಟಿರುವ ಮಾಹಿತಿ  ಲಭಿಸಿತ್ತು. ಅದರ ಆಧಾರದಲ್ಲಿ ಪೊಲೀಸರು ಆ ಮನೆಗೆ ದಾಳಿ ಹಾಗೂ ತಪಾಸಣೆ ನಡೆಸಿದಾಗ ಅಲ್ಲಿ ಖೋಟಾನೋಟುಗಳು ಪತ್ತೆಯಾಗಿವೆ. ಮೇಲ್ಪರಂಬದ ಯುವಕನನ್ನು ಅಪಹರಿಸಿದುದಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ಒಟ್ಟು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಅಂತಾರಾಜ್ಯ ಅಮಾನ್ಯ ಹಾಗೂ ಖೋಟಾನೋಟುಗಳ ಜಾಲಗಳು ಕಾರ್ಯವೆಸಗುತ್ತಿದೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದ್ದು, ಅದರಿಂದಾಗಿ ಈ ತನಿಖೆಯನ್ನು ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೂ ಪೊಲೀಸರು ವಿಸ್ತರಿಸಿದ್ದಾರೆ.

RELATED NEWS

You cannot copy contents of this page