ಕಾಸರಗೋಡು: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಡಲ್ಕೊರೆತವನ್ನು ತಡೆಗಟ್ಟಲು ವಿವಿಧ ಯೋಜನೆಗಳನ್ನು ಜ್ಯಾರಿಗೊಳಿಸುವುದಾಗಿ ಶಾಸಕ ಸಿ.ಎಚ್.ಕುಞಂಬು ಮಂಡಿಸಿದ ಸಬ್ಮಿಶನ್ಗೆ ಉತ್ತರವಾಗಿ ನೀರಾವರಿ ಸಚಿವ ರೋಶಿ ಅಗಸ್ಟಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 2025ರಲ್ಲಿ ತೀವ್ರ ಕಡಲ್ಕೊರೆತ ಕಂಡುಬಂದಿದ್ದು, 87.65 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಜಿಲ್ಲೆಯ ತೀರಪ್ರದೇಶಗಳಲ್ಲಿ ಕಡಲ್ಕೊರೆತ ಬೆದರಿಕೆ ಉಂಟಾಗಿದ್ದು, ನಾಶ ನಷ್ಟ ಸಂಭವಿಸಿದೆ. ಕಡಲ್ಕೊರೆತ ತೀವ್ರವಾದ ಕಣ್ವತೀರ್ಥ, ಮುಸೋಡಿ, ಉಪ್ಪಳದ ಹನುಮಾನ್ ನಗರ, ಐಲ ಕಡಪ್ಪುರ, ಮಣಿಮುಂಡ, ಕೊಯಿಪ್ಪಾಡಿ, ಕಾವುಗೋಳಿ, ಕೀಯೂರು, ಚೆಂಬರಿಕ, ತೃಕನ್ನಾಡ್, ಅಜಾನೂರು, ವಲಿಯಪರಂಬ ಎಂಬೆಡೆಗಳಲ್ಲಿ ತೀರ ಸಂರಕ್ಷಣೆ ಚಟುವಟಿಕೆಗಳಿಗಾಗಿ ಪ್ರೊಪೋಸಲ್ ಸಿದ್ಧಪಡಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಕಣ್ವತೀರ್ಥ, ಕೊಯಿಪ್ಪಾಡಿ, ತೃಕನ್ನಾಡ್ ಎಂಬೀ ಸಮುದ್ರ ತೀರಗಳಲ್ಲಿ ವಿಶ್ವಬ್ಯಾಂಕ್ನ ಸಹಾಯದೊಂದಿಗೆ ತೀರ ಸಂರಕ್ಷಣೆ ಚಟುವಟಿಕೆಗಳನ್ನು ಜ್ಯಾರಿಗೊಳಿಸುವುದಕ್ಕೆ ಮುಂಚಿತವಾಗಿರುವ ಇನ್ವೆಸ್ಟಿಗೇಶನ್ ಕ್ರಮಗಳನ್ನು ಮಿಶನ್ ಡಯರೆಕ್ಟರೇಟ್ನ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಈ ಸ್ಥಳಗಳಲ್ಲಿ ಜಿಯೋಬ್ಯಾಗ್ ಉಪಯೋಗಿಸಿ ತಾತ್ಕಾಲಿಕ ಸಂರಕ್ಷಣೆ ಸಿದ್ಧಪಡಿಸಲು 50 ಲಕ್ಷ ರೂ.ಗಳ ಡಿ.ಪಿ.ಆರ್. ನೀರಾವರಿ ಇಲಾಖೆ ಜಿಲ್ಲಾಧಿಕಾರಿಗೆ ಲಭ್ಯಗೊಳಿಸಿದೆ. 2026-27ನೇ ವಾರ್ಷಿಕ ಯೋಜನೆಯಲ್ಲಿ ಈ ಪ್ರದೇಶಗಳಲ್ಲಿ 7455 ಲಕ್ಷ ರೂ.ಗಳ ಪ್ರೊಪೋಸಲ್ಗಳಿಗಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.
ಮುಸೋಡಿ ಕಡಪ್ಪುರ ಭಾಗಗಳಲ್ಲಿ ಮಂಜೇಶ್ವರ ಹಾರ್ಬರ್ ನಿರ್ಮಾಣದ ಹಿನ್ನೆಲೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಇದನ್ನು ಪರಿಹರಿಸಲು ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಕಿಫ್ಬಿ ಯೋಜನೆಯಲ್ಲಿ ಸೇರಿಸಿ 13 ಗ್ರೋಯಿನ್ಗಳನ್ನು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಸೇರಿಸಿ 6 ಗ್ರೋಯಿನ್ಗಳು, ಐದು ಕಿಲೋ ಮೀಟರ್ನಷ್ಟು ಉದ್ದದ ಸಮುದ್ರ ಭಿತ್ತಿ ನಿರ್ಮಿಸಲಾಗಿದೆ. ಕಾಸರಗೋಡು ಹಾರ್ಬರ್ನ ದಕ್ಷಿಣ ಭಾಗದಲ್ಲಿರುವ ಕೀಯೂರು ಚೆಂಬರಿಕ ಸಮುದ್ರ ತೀರದಲ್ಲಿ ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಬಾತಿಮೆಟ್ರಿ ಸಹಿತದ ಅಧ್ಯಯನಕ್ಕಿರುವ 33 ಲಕ್ಷ ರೂ.ಗಳ ಇನ್ವೆಸ್ಟಿಗೇಶನ್ ಎಸ್ಟಿಮೇಟ್ ಸಿದ್ಧಪಡಿಸಿರುವುದಾಗಿಯೂ, ಮೊತ್ತ ಲಭ್ಯವಾಗುವ ಸಂದರ್ಭದಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ. ಉಪ್ಪಳ ಹನುಮಾನ್ ನಗರ, ಐಲ ಕಡಪ್ಪುರ, ಮಣಿಮುಂಡ ಕಡಪ್ಪುರ ಎಂಬೀ ಸ್ಥಳಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಪ್ರಸ್ತುತ ಸ್ಥಳಗಳಲ್ಲಿ ಸಂರಕ್ಷಣೆ ಕಾರ್ಯಗಳಿಗಾಗಿ ಬಾತಿಮೆಟ್ರಿ ಅಧ್ಯಯನಕ್ಕಿರುವ ಇನ್ವೆಸ್ಟಿಗೇಶನ್ ಎಸ್ಟಿಮೇಟ್ ಸಿದ್ಧಪಡಿಸುತ್ತಿರುವುದಾಗಿಯೂ ಸಚಿವರು ತಿಳಿಸಿದ್ದಾರೆ.