ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದೆಡೆ ಕಲೋತ್ಸವ ನಡೆಯುತ್ತಿದ್ದಂತೆ ಮತ್ತೊಂದೆಡೆ ರಾಜಕೀಯ ಪಕ್ಷದವರು ಘೋಷಣೆ ಮೊಳಗಿಸುತ್ತಾ ಸ್ಪರ್ಧೆಗಿಳಿದಿರುವುದು ನಿನ್ನೆ ಕಂಡು ಬಂದಿದೆ.
ಬಿಜೆಪಿ ಏಕಾಂಗಿಯಾಗಿ ಘೋಷಣೆ ಮೊಳಗಿಸುತ್ತಿದ್ದಾಗ ಸಿಪಿಎಂ, ಎಸ್‌ಡಿಪಿಐ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ಒಟ್ಟಾಗಿ ಘೋಷಣೆ ಮೊಳಗಿಸಿವೆ. ಈ ಎಲ್ಲಾ ಘೋಷಣೆಗಳ ವಿಷಯ ಕೋಮುವಾದವೇ ಆಗಿತ್ತು. ಕೋಮುವಾದ ವಿರುದ್ಧ ಹೋರಾಟದಂಗವಾಗಿ ನಡೆದ ಘೋಷಣೆ ಒಂದನ್ನೊಂದು ಮೀರಿಸುವಂತದ್ದಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳು ಕಲೋತ್ಸವ ಸ್ಪರ್ಧೆಗಳನ್ನು ವೀಕ್ಷಿಸುತ್ತಿದ್ದರು.

ಇದೇ ಸಂದರ್ಭದಲ್ಲಿ ಶಾಲಾ ಮೈದಾನದ ಹೊರಗೆ ರಾಜಕೀಯ ಪಕ್ಷಗಳು ಕೋಮುವಾದ ವಿರುದ್ಧ ನಡೆಸಿದ ಘೋಷಣೆಗಳ ಸ್ಪರ್ಧೆ ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿತು. ರಾಜಕೀಯದವರು ವಿದ್ಯಾರ್ಥಿಗಳನ್ನು ಕಂಡು ಕಲಿಯಲಿ ಎಂಬ ಅಭಿಪ್ರಾಯವು ಈ ವೇಳೆ ಕೆಲವರಿಂದ ಕೇಳಿ ಬಂತು. ಇದೇ ವೇಳೆ ಪೊಲೀಸರು ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗು ಬಂದೋಬಸ್ತ್ ಏರ್ಪಡಿಸಿದ್ದರು. ಬಿಜೆಪಿ ಮಾರ್ಚ್‌ನಲ್ಲಿ ವಲಯ ಅಧ್ಯಕ್ಷ ವಿಜಯ ರೈ, ಯುವಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್ ಮಾತನಾಡಿದರು.

ಸಿಪಿಎಂ, ಎಸ್‌ಡಿಪಿಐ, ಲೀಗ್ ಪ್ರತಿಭಟನೆಗೆ ಲೀಗ್ ನೇತಾರರಾದ ನಸೀರ್ ಕುಂಬಳೆ, ಎ.ಬಿ. ಹನೀಫ್, ಸಿಪಿಎಂ ನೇತಾರರಾದ ಹೈರಾತ್, ಅಬ್ದುಲ್ಲ, ಎಸ್‌ಡಿಪಿಐ ನೇತಾರರಾದ ಪಂಚಾಯತ್ ಸದಸ್ಯ ಅನ್ವರ್, ನಾಸರ್ ನೇತೃತ್ವ ನೀಡಿದರು. ಅಲ್ಪ ಹೊತ್ತಿನ ಬಳಿಕ ಎಲ್ಲರೂ ಶಾಂತರಾಗಿ ಮರಳಿದರು.